ಬೀಜಿಂಗ್: ನಮ್ಮಲ್ಲಿ ಮಕ್ಕಳಾಗಲು ಕೆಲವರಿಗೆ ಮದುವೆ ಅನ್ನೋ ಲೈಸನ್ಸೂ ಬೇಕಿಲ್ಲ. ಆದರೆ, ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಮಾತ್ರ ಪರಿಸ್ಥಿತಿ ಹಾಗಿಲ್ಲ. ಅಲ್ಲಿ ಮದುವೆಗೆ ಪರ್ಮಿಷ ನ್ ಬೇಡ. ಆದರೆ ಒಂದೇ ಮಗು ಎನ್ನುವ ನಿಯಮ ಇರುವ ಹಿನ್ನೆಲೆಯಲ್ಲಿ ಬೀಜಿಂಗ್ ನಗರದಲ್ಲಿ 2ನೇ ಮಗುವಿಗೆ ಸರ್ಕಾರದ ಲೈಸನ್ಸ್ ಕಡ್ಡಾಯ.
ಸರ್ಕಾರ ಓಕೆ ಅಂದ್ರೆನೇ 2ನೇ ಹೆರಿಗೆ. ಇಲ್ಲಾಂದ್ರೆ ಒಂದರಲ್ಲೇ ಅಡ್ಜೆಸ್ಟ್ ಮಾಡಿಕೊಳ್ಳಬೇಕು.ಕಳೆದ ವರ್ಷವಷ್ಟೇ ಅಲ್ಲಿನ ಸರ್ಕಾರ ವಿವಾದಾತ್ಮಕ ಒಂದೇ ಮಗು ನಿಯಮವನ್ನು ಸಡಿಲಗೊಳಿಸಿತ್ತು. ಆ ಬಳಿಕ ಈ ಸೆಪ್ಟೆಂಬರ್‍ವರೆಗೆ ಸುಮಾರು 53,034 ದಂಪತಿ ಎರಡನೇ ಮಗುವಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರಂತೆ. ಇದರಲ್ಲಿ 48,392 ಮಂದಿಗೆ ಸರ್ಕಾರ ಹಸಿರು ನಿಶಾನೆ ನೀಡಿಯೂ ಆಗಿದೆ ಯಂತೆ. ಉಳಿದವರು ಅನುಮತಿಗಾಗಿ ಕಾಯುತ್ತಿದ್ದಾರೆ.
ವಿಶೇಷವೆಂದರೆ ಈ ರೀತಿ 2ನೇ ಮಗು ಹೊಂದ ಬಯಸಿ ಅರ್ಜಿ ಸಲ್ಲಿಸಿದವರಲ್ಲಿ ಶೇ.57ರಷ್ಟು ಮಂದಿ 31ರಿಂದ 35 ವರ್ಷ ನಡುವಿನವರಂತೆ. ಚೀನಾವು ತನ್ನ ಏರುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಲು 1970ರಲ್ಲಿ ನಗರದ ದಂಪತಿಗಳಿಗೆ ಒಂದೇ ಮಗು ಎನ್ನುವ ನಿಯಮ ಜಾರಿ ಮಾಡಿತ್ತು. ಗ್ರಾಮೀಣ ಪ್ರದೇಶದ ದಂಪತಿ ಬಹುತೇಕ ಎರಡು ಮಗು ಹೊಂದಲು ಅವಕಾಶ ನೀಡಲಾಗಿತ್ತು. ಅದೂ ಮೊದಲೇ ಮಗು ಹೆಣ್ಣಾಗಿದ್ದರಷ್ಟೇ
ಎರಡನೇ ಹೆರಿಗೆಗೆ ಅವಕಾಶ ಸಿಗುತ್ತಿತ್ತು.