ನವದೆಹಲಿ: ಪಾಕಿಸ್ತಾನ, ಅಫ್ಘಾನಿಸ್ಥಾನ ಮತ್ತು ಉತ್ತರ ಭಾರತದಾದ್ಯಂತ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಪರಿಣಾಮ 150 ಕ್ಕೂ ಮಂದಿ ಸಾವನ್ನಪ್ಪಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಪೇಶಾವರದಿಂದ 260 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಪರಿಣಾಮ ರಾಷ್ಟ್ರದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಮಿ ನಡುಗಿದ್ದು, ಪಂಜಾಬ್, ಛತ್ತೀಸ್ ಘಡ, ಗುಜರಾತ್ ಹಾಗೂ ಬಹುತೇಕ ಕಡೆಗಳಲ್ಲಿ ಭೂಕಂಪನವಾಗಿರುವಂತೆ ವರದಿಗಳಾಗಿವೆ.
ಭೂಕಂಪನದಿಂದಾಗಿ ಹಲವೆಡೆ ಕಟ್ಟಡಗಳು ಧರೆಗುರುಳಿರುವುದಾಗಿ ತಿಳಿದುಬಂದಿದೆ. ಭಾರತದಲ್ಲಿ ಸಂಭವಿಸಿರುವ ಭೂಕಂಪನದಲ್ಲಿ ಈ ವರೆಗೂ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಆದರೆ, ಭೂಕಂಪನದಿಂದಾಗಿ ಮೊಬೈಲ್ ನೆಟ್ ವರ್ಕ್ ಸೇವೆಗಳು ಹಲವೆಡೆ ಸ್ಥಗಿತಗೊಂಡಿದ್ದು, ಶ್ರೀನಗರ ಮೇಲ್ತೇತುವೆಯು ವಾಹನದಟ್ಟಣೆಯಿಂದ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿ ಪ್ರದೇಶದ ಹಿಂದೂಕುಷ್ ಪರ್ವತದಲ್ಲಿ ಭೂಕಂಪದ ಕೇಂದ್ರ ಬಿಂದು ಕಂಡುಬಂದಿದ್ದು, ಇಂದು ಮಧ್ಯಾಹ್ನ ಸಂಭವಿಸಿದ ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.7ರಷ್ಟು ದಾಖಲಾಗಿದೆ.
ಪಾಕಿಸ್ತಾನದಲ್ಲೂ ಪ್ರಬಲ ಭೂಕಂಪ ಸಂಭವಿಸಿದ್ದು, 8 ಮಕ್ಕಳು ಸೇರಿ 123 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಸ್ಲಾಮಾಬಾದ್, ರಾವಲ್ಪಿಂಡಿ, ಲಾಹೋರ್, ಸರ್ಗೋಡ ಮುಂತಾದ ನಗರಗಳಲ್ಲಿ ಭೂಕಂಪನವಾಗಿರುವಂತೆ ವರದಿಗಳು ತಿಳಿಸಿವೆ.
ಅಫ್ಘಾನಿಸ್ತಾನ
ಅಫ್ಘಾನಿಸ್ತಾನದಲ್ಲೂ ಭೂಕಂಪ ಸಂಭವಿಸಿದ್ದು, 100 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವವಿರುವುದಾಗಿ ವರದಿಗಳು ತಿಳಿಸಿವೆ. ಇದರಂತೆ ಭೂಕಂಪದಿಂದಾಗಿ ಭಯಭೀತಗೊಂಡ ಶಾಲಾ ಮಕ್ಕಳು ಶಾಲೆಯಿಂದ ಹೊರ ಹೋಗಲು ಮುಗಿಬಿದ್ದಿದ್ದಾರೆ. ಈ ವೇಳೆ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ 18 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸವೆ.
ಅಫ್ಘಾನಿಸ್ಥಾನದ ಟಖರ್ ನಲ್ಲಿರುವ ತಲುಕಾನ್ ಸಿಟಿಯಲ್ಲಿ ಕಾಲ್ತುಳಿತ ಸಂಭವಿಸಿರುವುದಾಗಿ ತಿಳಿದುಬಂದಿದ್ದು, ಭೂಕಂಪ ಸಂಭವಿಸುತ್ತಿದ್ದಂತೆ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಕೂಡಲೇ ಶಾಲಾ ಕಟ್ಟಡದಿಂದ ಹೊರಬರಲು ಪ್ರಾರಂಭಿಸಿದ್ದಾರೆ. ಈ ವೇಳೆ ಹೊರಬರುವ ತರಾತುರಿಯಲ್ಲಿ ವಿದ್ಯಾರ್ಥಿಗಳು ಶಾಲಾ ಬಾಗಿಲ ಬಳಿ ಮುಗಿಬಿದ್ದಿದ್ದಾರೆ. ಇದರಿಂದಾಗಿ ಕಾಲ್ತುಳಿತ ಆರಂಭವಾಗಿ ವಿದ್ಯಾರ್ಥಿಗಳು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದು, 35 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಪ್ರಧಾನಿ ಮೋದಿ ಪ್ರತಿಕ್ರಿಯೆ
ಪಾಕಿಸ್ತಾನ-ಅಫ್ಘಾನಿಸ್ತಾನದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪ ಕುರಿತಂತೆ ಈಗಾಗಲೇ ಟ್ವಿಟ್ಟರ್ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಎಲ್ಲರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಭೂಕಂಪಕ್ಕೆ ತುತ್ತಾಗಿರುವ ಪಾಕಿಸ್ತಾನಕ್ಕೆ ನೆರವು ನೀಡಲು ಭಾರತ ಸಿದ್ಧವಿದೆ. ಭೂಕಂಪ ಕುರಿತಂತೆ ತ್ವರಿತಗತಿಯ ಅಂದಾಜು ನೀಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
2015 ಎಪ್ರಿಲ್ ತಿಂಗಳಿನಲ್ಲಿಯೂ ನೇಪಾಳದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಪರಿಣಾಮ 9,000ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು ಅಲ್ಲದೆ, 25,000ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದರಂತೆ ಉತ್ತರ ಭಾರತದಲ್ಲೂ ಕಂಪನದಿಂದಾಗಿ 130 ಜನರು ಬಲಿಯಾಗಿ 560 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.