ಡಬ್ಲಿನ್: ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಚ್ಚಿದ ಯುವಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಭಾನುವಾರ ಐರಿಶ್ ನ ಏರ್ ಲಿಂಗಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 24 ರ ಹರೆಯದ ಬ್ರೆಝಿಲ್ ಯುವಕ ಸಹ ಪ್ರಯಾಣಿಕನೊಂದಿಗೆ ಜಗಳವಾಡಿ ಆತನ ಕಿವಿ ಕಚ್ಚಿದ್ದಾನೆ. ತಕ್ಷಣ ಕೆಲವೇ ನಿಮಿಷದಲ್ಲಿ ಆತ ಕುಸಿದು ಬಿದ್ದಿದ್ದಾನೆ. ಆತನಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಸಲುವಾಗಿ ಕಾರ್ಕ್ ಸಿಟಿಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಈವರೆಗೂ ಆತ ಮೃತಪಟ್ಟ ಕಾರಣ ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ.
ಮೃತಪಟ್ಟ ಈ ಯುವಕನೊಂದಿಗೆ 44 ರ ಹರೆಯದ ಪೋರ್ಚುಗಲ್ ಮಹಿಳೆ ಪ್ರಯಾಣಿಸುತ್ತಿದ್ದಳು. ಆಕೆಯ ಬ್ಯಾಗಿನಲ್ಲಿ 2 ಕಿಲೊ ಗಳಷ್ಟು ಆ್ಯಂಫೆಟಮೈನ್ ಡ್ರಗ್ ಗಳು ಪತ್ತೆಯಾಗಿದೆ. ಇದನ್ನು ವಶಪಡಿಸಿಕೊಂಡಿರುವ ಕಾರ್ಕ್ ಸಿಟಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಅಲ್ಲದೇ, ಕಿವಿ ಕಚ್ಚಿಸಿಕೊಂಡ ವ್ಯಕ್ತಿಗೆ ಕಾರ್ಕ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
