ಲಂಡನ್, ಸೆ. 30: ಮಹಾತ್ಮಾ ಗಾಂಧಿ ಮತ್ತು ಅವರ ಲಿಥುವೇನಿಯ ಸಂಜಾತ ಆತ್ಮೀಯ ಸ್ನೇಹಿತ ಹರ್ಮನ್ ಕ್ಯಾಲಂಬಾಕ್‌ರ ನೆನಪಿಗಾಗಿ ನಿರ್ಮಿಸಿದ ಸ್ಮಾರಕವೊಂದನ್ನು ಅನಾವರಣಗೊಳಿಸುವ ಮೂಲಕ ಲಿಥುವೇನಿಯ ಮಹಾತ್ಮಾ ಗಾಂಧಿಯ ಜನ್ಮ ದಿನವನ್ನು ಆಚರಿಸಲಿದೆ.
ಜರ್ಮನ್ ಯಹೂದಿ ವಾಸ್ತುಶಿಲ್ಪಿಯಾಗಿದ್ದ ಹರ್ಮನ್ ಮಹಾತ್ಮಾ ಗಾಂಧೀಜಿ ದಕ್ಷಿಣ ಆಫ್ರಿಕದಲ್ಲಿದ್ದಾಗ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು. ಅವರು 1,000 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಆ ಜಮೀನು ಬಳಿಕ ಟ್ರಾನ್ಸ್‌ವಾಲ್‌ನಲ್ಲಿನ ಸತ್ಯಾಗ್ರಹಿಗಳಿಗಾಗಿ ‘ಟಾಲ್‌ಸ್ಟಾಯ್ ಫಾರ್ಮ್’ ಆಗಿ ಮಾರ್ಪಾಡುಗೊಂಡಿತು.
ಮಹಾತ್ಮಾ ಗಾಂಧಿ ಮತ್ತು ಹರ್ಮನ್ ಅಕ್ಕಪಕ್ಕದಲ್ಲಿ ನಿಂತುಕೊಂಡಿರುವ ಕಂಚಿನ ಪುತ್ಥಳಿಯನ್ನು ಲಿಥುವೇನಿಯ ಪ್ರಧಾನಿ ಅಲ್ಗಿರ್‌ದಾಸ್ ಬಟ್ಕೆವಿಸಿಯಸ್ ಮತ್ತು ಭಾರತದ ಕೃಷಿ ಖಾತೆ ಸಹಾಯಕ ಸಚಿವ ಮೋಹನ್‌ಭಾಯ್ ಕುಂಡರಿಯ ಪಶ್ಚಿಮ ಲಿಥುವೇನಿಯದ ಪಟ್ಟಣ ರಸ್ನೆಯಲ್ಲಿ ಶುಕ್ರವಾರ ಅನಾವರಣಗೊಳಿಸಲಿದ್ದಾರೆ. ರಸ್ನೆ ಹರ್ಮನ್‌ರ ಜನ್ಮ ಸ್ಥಳವಾಗಿದೆ.
‘‘ಸ್ಮಾರಕ ನಿರ್ಮಾಣ ಭಾರತ-ಲಿಥುವೇನಿಯ ಸ್ನೇಹದ ದ್ಯೋತಕವಾಗಿದೆ. ನಮ್ಮ ಎರಡು ದೇಶಗಳನ್ನು ಸ್ನೇಹದಲ್ಲಿ ಬಂಧಿಸಿಡುವ ಹಲವಾರು ಸಂಗತಿಗಳಿವೆ. ಅವುಗಳೆಲ್ಲದಕ್ಕಿಂತಲೂ ಹೆಚ್ಚಿನದು ಗಾಂಧೀಜಿ ಮತ್ತು ಹರ್ಮನ್‌ರ ಪುತ್ಥಳಿಯಾಗಿದೆ. ಮಾನವ ಕುಲದ ಇತಿಹಾಸದ ಮೇಲೆ ಓರ್ವ ವ್ಯಕ್ತಿ ಬೀರಿದ ಪ್ರಭಾವವನ್ನು ಈ ಪುತ್ಥಳಿ ಸಂಕೇತಿಸುತ್ತದೆ’’ ಎಂದು ಭಾರತಕ್ಕೆ ಲಿಥುವೇನಿಯದ ರಾಯಭಾರಿ ಲೈಮೊನಾಸ್ ತಲಾತ್ ಕೆಲ್ಪ್‌ಸ ಹೇಳಿದರು.