ಅಂತರಾಷ್ಟ್ರೀಯ

ಮಧ್ಯಾಹ್ನದ ಲಘು ನಿದ್ರೆ ಆರೋಗ್ಯಕ್ಕೆ ಒಳ್ಳೆಯದು

Pinterest LinkedIn Tumblr

sleepಪ್ರತಿ ಜೀವಿಯ ಬದುಕಿನಲ್ಲಿ ಅದರಲ್ಲೂ ಮನುಷ್ಯರ ಜೀವನದಲ್ಲಿ ಬಹಳ ಉತ್ತಮವಾದದ್ದೇನಾದರೂ ನಿತ್ಯ ಘಟಿಸುತ್ತದೆ ಅಂದರೆ ಅದು ನಿದ್ರೆ. ವೈಜ್ಞಾನಿಕ ಭಾಷೆಯಲ್ಲಿ ಇದನ್ನು ನರಗಳಿಗೆ ಸಂಬಂಧಿಸಿದ ಜೈವಿಕ ಚಟುವಟಿಕೆ ಎಂದು ಹೇಳಲಾಗುತ್ತದೆ. ನಮ್ಮ ಬದುಕಿಗೆ ನಿದ್ರೆ ಬಹಳ ಅಗತ್ಯ. ನಿದ್ರೆಯ ಹೊರತು ಜೀವನ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಗುಣಮಟ್ಟವನ್ನು ಗಾಢವಾದ ನಿದ್ರೆಯಿಂದ ಅಳೆಯಬಹುದು. ಒಂದು ಮಾತು ಹೇಳುವುದಾದರೆ; ನಿದ್ರೆ ನಮ್ಮ ಸೃಷ್ಟಿಕರ್ತನು ಕೊಟ್ಟಿರುವ ವರ. ಇದೊಂದು ನೈಸರ್ಗಿಕವಾದ ಮತ್ತು ಎಲ್ಲರಿಗೂ ದಕ್ಕುವ ಸಹಜ ಕ್ರಿಯೆ.

ಒಬ್ಬ ಕವಿ ಹೇಳುತ್ತಾನೆ; ನೀವು ನಿದ್ರೆ ಮಾಡಲು ಮೊದಲು ಕಣ್ಣು ರೆಪ್ಪೆಗಳನ್ನು ಮುಚ್ಚಿ, ಕೆಲವೇ ನಿಮಿಷಗಳಲ್ಲಿ ನೀವು ನಿಮ್ಮ ಎಲ್ಲಾ ಚಟುವಟಿಕೆಗಳಿಂದ ಆಚೆ ಬರುತ್ತೀರಿ, ನಿಮ್ಮ ಇಂದ್ರಿಯಗಳು ಕೂಡ ತಟಸ್ಥವಾಗಿ ಪರಮ ಸುಖದ ಸ್ಥಿತಿಗೆ ನೀವು ತಲುಪುತ್ತೀರಿ. ನಿತ್ಯ ಜೀವನದ ಭಾಗವಾದ ನಿದ್ರೆ ದೇಹವನ್ನು ಪುನರುಜ್ಜೀವನಗೊಳಿಸುತ್ತದೆ, ಮನಸ್ಸನ್ನು ಶಕ್ತಿಯುತವಾಗಿಸುತ್ತದೆ ಮತ್ತು ಹೃದಯವನ್ನು ಚೈತನ್ಯದಿಂದ ಇಡುತ್ತದೆ ಎಂದು ವೈದ್ಯರು ಹೇಳುತ್ತಾರೆ.ಬಹುತೇಕರು ಹಗಲಿನ ವೇಳೆ ದೇಹ ಮತ್ತು ಮನಸ್ಸನ್ನು ದಣಿಸಿ ರಾತ್ರಿ ನಿದ್ರೆಗೆ ಜಾರುವುದು ವಾಡಿಕೆ. ನೀವು ಯಾವುದೇ ಕೆಲಸ ಮಾಡುತ್ತಿರಲಿ ಎಂಥದ್ದೇ ಜೀವನ ಶೈಲಿ ಅಳವಡಿಸಿಕೊಂಡಿರಲಿ ನಿದ್ರಿಸಲು ಇಂಥದ್ದೇ ಸಮಯ ಇರಬೇಕೆಂದೇನೂ ಇಲ್ಲ. ಪ್ರತಿ ಗಂಟೆಯೂ ನಿದ್ರಿಸಲು ಪ್ರಶಸ್ತವಾಗಿಯೇ ಇರುತ್ತದೆ. ಅದರಲ್ಲೂ ಒಳ್ಳೆಯ ಸಮಯವೆಂದರೆ ಮಧ್ಯಾಹ್ನ. ನೀವೆಲ್ಲಿಯಾದರೂ ಇರಿ, ಯಾವ ಜಾಗದಲ್ಲಾದರೂ ಇರಿ, ಯಾವ ಭಂಗಿಯಲ್ಲಾದರೂ ಸರಿ ನಿದ್ರಿಸಲು ತೊಂದರೆ ಇಲ್ಲ. ಮಧ್ಯಾಹ್ನದ ನಿದ್ರೆಯಲ್ಲಿ 40 ತೂಕಡಿಕೆ ಒಂದು ರಾತ್ರಿಯ ನಿದ್ರೆಗೆ ಸಮ ಎಂದು ಹೇಳಲಾಗಿದೆ.

ಎಲ್ಲ ಹಂತದಲ್ಲೂ ಇದರ ಪರಿಣಾಮ ಉತ್ತಮವಾಗಿರುತ್ತದೆ. ಪದಗಳಲ್ಲಿ ಹೇಳಲಾಗದ್ದು ಚಿತ್ರಗಳಲ್ಲಿ ಹೇಳಬಹುದು ಎಂಬಂತೆ ಬೆಂಗಳೂರಿನ ಛಾಯಾಗ್ರಾಹಕ ಕೆ.ವೆಂಕಟೇಶ್ ಉದ್ಯಾನನಗರಿಯ ಸಾರ್ವಜನಿಕ ಪ್ರದೇಶಗಳಲ್ಲಿ ಶ್ರೀ ಸಾಮಾನ್ಯರು ಮಧ್ಯಾಹ್ನದ ವೇಳೆ ನಿದ್ರೆಗೆ ಜಾರಿರುವ ಸಂದರ್ಭಗಳನ್ನು ಎದ್ದು ಕಾಣುವಂತೆ ಸೆರೆ ಹಿಡಿದಿದ್ದಾರೆ. ವಿವಿಧ ಭಂಗಿಗಳು, ವಿವಿಧ ಮನಸ್ಥಿತಿ ಹಾಗೂ ಪರಿಸ್ಥಿತಿಗಳನ್ನು ಸೆರೆ ಹಿಡಿದಿರುವ ಛಾಯಾಗ್ರಾಹಕ ತನ್ನ ಕಣ್ಣ ಒಳನೋಟವನ್ನು ಇತರರಿಗೂ ಕಾಣಿಸಿದ್ದಾರೆ. ಇವರೆಲ್ಲ ಬೇರೆಯವರು ಏನೆಂದುಕೊಂಡಾರು ಎಂಬ ಕಿಂಚಿತ್ ಅಳುಕೂ ಇಲ್ಲದೆ ತಮ್ಮ ಮಧ್ಯಾಹ್ನದ ನಿದ್ರೆಯಲ್ಲಿ ಮಗ್ನರಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಆರಾಮವಾಗಿ ನಿದ್ರೆಗೆ ಜಾರಿಬಿಡುವ ಶ್ರೀ ಸಾಮಾನ್ಯರ ಚಿತ್ರಗಳನ್ನು ಸೆರೆ ಹಿಡಿದಿರುವ ಕೆ.ವೆಂಕಟೇಶ್ ನಿದ್ರೆಯೊಳಗೆ ಕಳೆದು ಹೋಗಿರುವವರನ್ನು, ತಮ್ಮ ಬ್ಯಾಗು ಇನ್ನಿತರೆ ವಸ್ತುಗಳ ಮೇಲೆ ನಿದ್ರಿಸುತ್ತಿರುವವರನ್ನು ತಮ್ಮ ಕ್ಯಾಮೆರಾ ಭಾಷೆಯಲ್ಲಿ ಚಿತ್ರಿಸಿದ್ದಾರೆ.

ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ, ಪಾರ್ಕ್‌ಗಳು, ಕಾರು, ಕಚೇರಿಗಳು ಮತ್ತು ಮಾರುಕಟ್ಟೆ ಮುಂತಾದ ಸ್ಥಳಗಳಲ್ಲಿ ತಮ್ಮ ಅಸ್ತಿತ್ವವನ್ನೇ ಕ್ಷಣಕಾಲ ಇಲ್ಲವಾಗಿಸಿಕೊಂಡಂತೆ ನಿದ್ರೆಗೆ ಜಾರಿರುವ ಮಂದಿಯನ್ನು ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ. ಈ ಅಪರಿಚಿತ ವ್ಯಕ್ತಿಗಳು ಯಾವುದೇ ಪರಿಸ್ಥಿತಿಯಲ್ಲಿದ್ದರೂ ತಮ್ಮ ಪರಿಸರದಲ್ಲಿ ಮಧ್ಯಾಹ್ನದ ನಿದ್ರೆಗೆ ತಕ್ಕುದಾದ ಜಾಗಗಳನ್ನು ಕಂಡುಕೊಂಡು ಲೌಕಿಕ ಪ್ರಪಂಚದ ಯಾವ ಅರಿವೂ ಇಲ್ಲದೆ, ಸುತ್ತಮುತ್ತಲಿನ ಗದ್ದಲ-ಗಲಾಟೆಗಳಿಗೆ ಕಿವಿಗೊಡದೆ ಸೊಂಪಾಗಿ ನಿದ್ರಿಸುತ್ತಿದ್ದಾರೆ ಎಂಬುದು ಕೆ. ವೆಂಕಟೇಶ್‌ರ ಈ ಚಿತ್ರ ಪ್ರದರ್ಶನ ಕಾಣಿಸುತ್ತಿದೆ. ಪ್ರತಿ ಜೀವಿಯೂ ತಮ್ಮ ನಿತ್ಯದ ಚಟುವಟಿಕೆಗಳ ಜತೆ 40 ತೂಕಡಿಕೆ ಅಥವಾ ಜೋಂಪು ತೆಗೆಯುವುದು ಏಕೆ ಮತ್ತು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳುವ ಸಂದರ್ಭದಲ್ಲಿಯೇ ಯಾವ ಪೂರ್ವಾಪರಗಳನ್ನು ಪರಿಶೀಲಿಸದೆ ಈ ಛಾಯಾಗ್ರಾಹಕನೆಂಬ ತೀರ್ಪುಗಾರ ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯಾಹ್ನದ ನಿದ್ರೆಗೆ ಜಾರಿರುವ ಮಂದಿಯ ಫೋಟೋಗಳನ್ನು ಸೆರೆಹಿಡಿದಿದ್ದಾರೆ. ನಿತ್ಯದ ಚಟುವಟಿಕೆಯ ಭಾಗವಾಗಿ ನಮ್ಮ ಸುತ್ತಲಿನ ಪರಿಸರದಲ್ಲಿ ನಿದ್ರೆಯ ವಾತಾವರಣವಿದ್ದಾಗ ಅಥವಾ ಹೊಟ್ಟೆ ತುಂಬಾ ಗಡತ್ತಾಗಿ ತಿಂದಾಗ ನಿದ್ರೆ ಆವರಿಸುವುದು ಸಾಮಾನ್ಯ. ಇಂತಹ ನಿದ್ರೆಯೂ ನಮ್ಮನ್ನು ಉಲ್ಲಾಸಭರಿಸಿತ

ರನ್ನಾಗಿಸಬಲ್ಲದು. 40 ತೂಕಡಿಕೆ ಅಥವಾ ಜೋಂಪು ತೆಗೆಯುವನೂರಾರು ಜನರಲ್ಲಿ ಬಹುತೇಕ ಮಂದಿ ಹತ್ತಿರದ ಹಳ್ಳಿ ಅಥವಾ ಪಟ್ಟಣದವರಾಗಿದ್ದಾರೆ. ಅವರು ಒಂದು ದಿನದ ಪ್ರಯಾಣಕ್ಕಾಗಿ ಅಥವಾ ಒಂದಿಷ್ಟು ಹಣ ಗಳಿಕೆಗಾಗಿ ಬಂದವರೇ ಹೆಚ್ಚಿನವರಿದ್ದಾರೆ. ಕೆಲಸದ ನಡುವೆ ಸುಸ್ತಾಗಿ ತ್ರಾಣವಿಲ್ಲದಾದಾಗ ಈ ಪ್ರಯಾಣಿಕರು ಹೋಗುವುದಾದರೂ ಎಲ್ಲಿ. ಅವರು ತಮ್ಮ ಮಧ್ಯಾಹ್ನದ ನಿದ್ರೆಗೆ ಸಾರ್ವಜನಿಕ ಪ್ರದೇಶಗಳನ್ನೇ ಅವಲಂಬಿಸಬೇಕು. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ನಿದ್ರೆಗೆ ಜಾರುವವರನ್ನು ಸೆಕ್ಯೂರಿಟಿ ಹಾಗೂ ಪೊಲೀಸಿನವರು ಎಬ್ಬಿಸುವುದಲ್ಲದೆ, ಬೂಟುಕಾಲಿನಿಂದ ಒದೆಯುವ ಪ್ರಸಂಗಗಳೂ ನಡೆಯುತ್ತಿವೆ. ಈ ಬಗ್ಗೆ ಜಾಗರೂಕವಾಗಿರಬೇಕಾದ ಪರಿಸ್ಥಿತಿ ಕಾಡುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ನಿದ್ರೆ ಮಾಡುವುದು ಕೂಡ ಕಾನೂನು ಬಾಹಿರ ಎಂದು ಹೇಳುವುದಾದರೆ ಇದಕ್ಕಿಂತ ದುರಾದೃಷ್ಟ ಇನ್ನೊಂದಿಲ್ಲ. ನಿದ್ರೆ ಯಾರಿಗೂ ನಷ್ಟ ಮಾಡದ, ತೊಂದರೆ ಮಾಡದ ಒಂದು ಚಟುವಟಿಕೆ. ಹಾಗಾಗಿ ಇಂತಹವರಿಗೆ ತೊಂದರೆ ಕೊಡಬಾರದು ಎಂದು ಕೆ.ವೆಂಕಟೇಶ್ ಸರ್ಕಾರಕ್ಕೆ ತಾಕೀತು ಮಾಡುತ್ತಿದ್ದಾರೆ. ಒಂದು ಮಧ್ಯಾಹ್ನದ ಸುಖವಾದ ನಿದ್ರೆಯ ಈ ಚಿತ್ರ ಪ್ರದರ್ಶನ ಅನೇಕ ಹೊಳಹುಗಳಿಗೆ, ಚಿಂತನೆಗಳಿಗೆ ದಾರಿ ಮಾಡಿಕೊಡುತ್ತದೆ. ಇದನ್ನು ನೋಡಿದವರು ಹೊರ ಬಂದು ತೂಕಡಿಸುವಂತೆಯೂ ಪ್ರೇರೇಪಿಸುತ್ತದೆ. ಇಂದಿನಿಂದ 30ರ ವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಶ್ರೀಸಾಮಾನ್ಯರ ನಿದ್ರೆಯ ಭಂಗಿಗಳ ಕುರಿತು ವೆಂಕಟೇಶ್ ಅವರು ತೆಗೆದಿರುವ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

Write A Comment