ಅಂತರಾಷ್ಟ್ರೀಯ

‘ಫಾರ್ಚೂನ್ 500’ ಸಿಇಒಗಳ ಜೊತೆ ಪ್ರಧಾನಿ ಮೋದಿ ಸಂವಾದ

Pinterest LinkedIn Tumblr

modhi________ನ್ಯೂಯಾರ್ಕ್, ಸೆ.25: ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಶುಕ್ರವಾರ ಇಲ್ಲಿ ಸಂವಾದ ನಡೆಸಿದ ‘ಫಾರ್ಚೂನ್ 500’ ಕಂಪೆನಿಗಳ ಮುಖ್ಯಸ್ಥರು, ಭಾರತ ಸರಕಾರವು ಕೈಗೊಂಡಿರುವ ಸುಧಾರಣೆ ಮತ್ತು ಬದಲಾವಣೆಯ ಕ್ರಮಗಳ ಬಗ್ಗೆ ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.
‘ಫಾರ್ಚೂನ್ 500’ ಕಂಪೆನಿಗಳ ಒಟ್ಟು ವ್ಯವಹಾರದ ಮೊತ್ತ 4.5 ಟ್ರಿಲಿಯನ್ ಡಾಲರ್ ಮೀರುತ್ತದೆ.
ಮೋದಿ ಸರಕಾರವು ಕೈಗೊಂಡಿರುವ ಕ್ರಮಗಳನ್ನು ಸರಿಯಾಗಿ ಅಂದಾಜು ಮಾಡಿಲ್ಲ. ಯಾರೂ ವರದಿ ಮಾಡಿಲ್ಲ ಮತ್ತು ಶ್ಲಾಘನೆಯಾಗಿಲ್ಲ ಎಂದು ಕಂಪೆನಿಗಳ ಸಿಇಒಗಳು ಅಭಿಪ್ರಾಯಪಟ್ಟಿದ್ದಾರೆಂದು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ಅರುಣ್ ಕೆ.ಸಿಂಗ್ ಹೇಳಿದ್ದಾರೆ.
ಭಾರತದಲ್ಲಿನ ಬೆಳವಣಿಗೆಗಳ ಕುರಿತು ಅವರಿಗೆಲ್ಲ ಮನವರಿಕೆಯಾಗಿದೆ. ಜೊತೆಗೆ ಬಹುತೇಕರು ಈಗಾಗಲೇ ಭಾರತದಲ್ಲಿ ಬಂಡವಾಳ ಹೂಡಿದ್ದಾರೆ ಎಂದು ಸಿಂಗ್ ತಿಳಿಸಿದರು.
ಭಾರತದಲ್ಲಿನ ಬದಲಾವಣೆಗಳ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಸಂತೋಷವಾಗಿದೆ. ಬದಲಾವಣೆಗಳು ತ್ವರಿತಗತಿಯಲ್ಲಿ ನಡೆಯಬೇಕು ಎಂಬುದೊಂದೇ ಅವರೆಲ್ಲರ ಬೇಡಿಕೆಯಾಗಿತ್ತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ತಮ್ಮ ಸರಕಾರವು ಖಾಸಗಿರಂಗದ ಉತ್ತೇಜನದಲ್ಲಿ ನಂಬಿಕೆ ಇರಿಸಿದೆ. ಜೊತೆಗೆ ಪಾರದರ್ಶಕವಾದ ಹಾಗೂ ಊಹೆಗೆ ನಿಲುಕುವ ಆಡಳಿತ ವ್ಯವಸ್ಥೆಯನ್ನು ಹೊಂದಲಿದೆ ಎಂದು ಪ್ರಧಾನಿ ಮೋದಿ ಕಂಪೆನಿಗಳ ಮುಖ್ಯಸ್ಥರಿಗೆ ಭರವಸೆ ನೀಡಿದ್ದಾರೆಂದು ಅವರು ತಿಳಿಸಿದರು.

ಅಮೆರಿಕದ ಸಲಹಾ ಸಮಿತಿಗೆ 3 ಭಾರತೀಯ ಅಮೆರಿಕನ್ನರ ನೇಮಕ
ವಾಶಿಂಗ್ಟನ್, ಸೆ. 25: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಧರ್ಮಾಧಾರಿತ ಹಾಗೂ ನೆರೆಹೊರೆ ಭಾಗೀದಾರಿಕೆಗಳಿಗೆ ಸಂಬಂಧಿಸಿದ ಸಲಹಾ ಸಮಿತಿಗೆ ಮೂವರು ಭಾರತೀಯ ಅಮೆರಿಕನ್ನರನ್ನು ನೇಮಿಸಿದ್ದಾರೆ.
ಧಾರ್ಮಿಕ ಮತ್ತು ಜಾತ್ಯತೀತ ನಾಯಕರು ಹಾಗೂ ತಮ್ಮ ತಮ್ಮ ಕ್ಷೇತ್ರಗಳ ಪರಿಣತರನ್ನು ಒಟ್ಟಿಗೆ ತರುವ ಉದ್ದೇಶದ ಸಲಹಾ ಸಮಿತಿಗೆ ಪ್ರೀತಾ ಬನ್ಸಾಲ್, ನಿಪುಣ್ ಮೆಹ್ತಾ ಮತ್ತು ಜಸ್ಜಿತ್ ಸಿಂಗ್ ಹಾಗೂ ಇತರ 14 ಮಂದಿಯನ್ನು ಒಬಾಮ ಆರಿಸಿದ್ದಾರೆ. ‘‘ಈ ಪ್ರತಿಭಾವಂತ ಪುರುಷರು ಮತ್ತು ಮಹಿಳೆಯರು ಅಮೆರಿಕದ ಜನತೆಗೆ ಶ್ರೇಷ್ಠ ಸೇವೆ ನೀಡಲಿದ್ದಾರೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಅವರೊಂದಿಗೆ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ’’ ಎಂದು ಒಬಾಮ ಹೇಳಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ಶ್ವೇತಭವನ ತಿಳಿಸಿದೆ.
ಪ್ರೀತಾ ಬನ್ಸಾಲ್ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮೀಡಿಯಾ ಲ್ಯಾಬ್‌ನಲ್ಲಿ ಉಪನ್ಯಾಸಕಿಯಾಗಿದ್ದಾರೆ ಹಾಗೂ ಎಂಐಟಿಯ ಲ್ಯಾಬರೇಟರಿ ಫಾರ್ ಸೋಶಿಯಲ್ ಮೆಶಿನ್ಸ್‌ನಲ್ಲಿ ಹಿರಿಯ ಸಲಹಾಗಾರ್ತಿಯಾಗಿದ್ದಾರೆ.
ನಿಪುಣ್ ಮೆಹ್ತಾ 1999ರಲ್ಲಿ ಸ್ಥಾಪನೆಯಾದ ಲಾಭರಹಿತ ಸಂಸ್ಥೆ ‘ಸರ್ವಿಸ್ ಸ್ಪೇಸ್’ನ ಸ್ಥಾಪಕರಾಗಿದ್ದಾರೆ. 1998ರಿಂದ 2001ರವರೆಗೆ ಅವರು ಸನ್ ಮೈಕ್ರೋಸಿಸ್ಟಮ್ಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು.
ಜಸ್ಜಿತ್ ಸಿಂಗ್ ಸಿಖ್ ಅಮೆರಿಕನ್ ಲೀಗಲ್ ಡಿಫೆನ್ಸ್ ಆ್ಯಂಡ್ ಎಜುಕೇಶನ್ ಫಂಡ್ (ಎಸ್‌ಎಎಲ್‌ಡಿಇಎಫ್)ನಲ್ಲಿ 2012ರಿಂದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅವರು ಇಲಿನೋಯಿಸ್ ವಿಶ್ವವಿದ್ಯಾನಿಲಯದಲ್ಲಿ ಸಿಖ್ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ ಸ್ಥಾಪಕರಾಗಿದ್ದು, 2000ದಿಂದ 2002ರವರೆಗೆ ಅದರ ಅಧ್ಯಕ್ಷರಾಗಿದ್ದರು.

ಸೋಮವಾರ ಒಬಾಮ-ಮೋದಿ ಭೇಟಿ
ನ್ಯೂಯಾರ್ಕ್, ಸೆ.25: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮುಂದಿನ ಸೋಮವಾರ ವಿಶ್ವಸಂಸ್ಥೆಯ ಮಹಾಧಿವೇಶನದ ಉದ್ಘಾಟನಾ ಸಮಾರಂಭದ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಈ ವರ್ಷದ ಜನವರಿಯಲ್ಲಿ ಹೊಸದಿಲ್ಲಿಯಲ್ಲಿ ಉಭಯ ನಾಯಕರು ನಡೆಸಿದ್ದ ಚರ್ಚೆಯ ಮುಂದುವರಿದ ಭಾಗವಾಗಿ ದ್ವಿಪಕ್ಷೀಯ ವಿಚಾರಗಳನ್ನು ಚರ್ಚಿಸಲು ಇದೊಂದು ಸೂಕ್ತ ವೇದಿಕೆಯಾಗಲಿದೆ ಎಂದು ಶ್ವೇತಭವನ ಹೇಳಿಕೆಯೊಂದರಲ್ಲಿ ಬಣ್ಣಿಸಿದೆ. ಏಶ್ಯ ಹಾಗೂ ವಿಶ್ವದಾದ್ಯಂತ ರಾಜಕೀಯ ಹಾಗೂ ಭದ್ರತಾ ಸಹಕಾರ, ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ರೂಪಿಸುವ ತಮ್ಮ ಯೋಜನೆಯ ಅಂಗವಾಗಿ ಭಾರತದೊಂದಿಗೆ ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ರೂಪಿಸುವುದಕ್ಕೆ ಕಟಿಬದ್ಧರಾಗಿದ್ದೇವೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಹಾಯಕ ಸಲಹೆಗಾರ ಬೆನ್ ರ್ಹೋಡ್ಸ್ ಹೇಳಿದ್ದಾರೆ.

Write A Comment