ಸೌಂದರ್ಯವೆನ್ನುವುದು ತ್ವಚೆಯ ಬಣ್ಣದಲ್ಲೋ, ಮುಖದಲ್ಲೋ ಇರುವುದಿಲ್ಲ. ಅದಿರುವುದು ನಿಷ್ಕಲ್ಮಷ ಮನಸ್ಸಿನಲ್ಲಿ. ಪರೋಪಕಾರ ಗುಣ, ದಯೆ, ಪ್ರೀತಿ ಇವುಗಳೇ ಮನುಷ್ಯರನ್ನು ಸುಂದರವಾಗುವಂತೆ ಮಾಡುತ್ತದೆ. ಇಲ್ಲೊಬ್ಬ ಮದುಮಗಳಿದ್ದಾಳೆ, ಸೋಷ್ಯಲ್ ಮೀಡಿಯಾಗಳಲ್ಲಿ ಈಕೆಯನ್ನು ವಿಶ್ವದ ಅತೀ ಸುಂದರಿಯಾಗಿರುವ ಮದುಮಗಳು ಎಂದೇ ಹೆಸರಿಸಲಾಗುತ್ತಿದೆ. ಈ ಚೀನಾದ ಮದುಮಗಳು ಹೃದಯ ವೈಶಾಲ್ಯತೆಯೇ ಆಕೆಗೆ ಸುಂದರಿ ಮದುಮಗಳು ಎಂಬ ಬಿರುದನ್ನು ನೀಡಿದೆ.
ಗುವೋ ಯುವಾನ್ಯುವಾನ್ ಎಂಬಾಕೆ ಆಗಷ್ಟೇ ಹಸೆಮಣೆಯೇರಿದ್ದಳು. ಮದುವೆಯ ಶಾಸ್ತ್ರಗಳನ್ನು ಮುಗಿಸಿ ತನ್ನ ಪತಿಯ ಕೈ ಹಿಡಿದು ಕಡಲ ತೀರದಲ್ಲಿ ಫೋಟೋ ಶೂಟ್ ನಡೆಯುತ್ತಿದ್ದ ಸಂದರ್ಭವದು. ಫೋಟೋಗ್ರಾಫರ್ ಹೇಳಿದಂತೆ ಎಲ್ಲ ರೀತಿಯಲ್ಲಿ ಪೋಸ್ ಕೊಟ್ಟು ಸಂಭ್ರಮಿಸುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ಯಾರೋ ನೀರಲ್ಲಿ ಮುಳುಗುತ್ತಾ, ಸಹಾಯ ಮಾಡಿ ಎಂದು ಗೋಗರೆಯುವ ಅಳು ಕೇಳಿಸಿತು. ಗುವೋ ಮತ್ತೇನೂ ಯೋಚಿಸಿಯೇ ಇಲ್ಲ. ವೃತ್ತಿಯಲ್ಲಿ ನರ್ಸ್ ಆಗಿರುವ ಆಕೆ ಮದುಮಗಳ ಪೋಷಾಕಿನಲ್ಲೇ ನೀರಿಗೆ ಧುಮುಕಿ, ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿ ದಡಕ್ಕೆ ಕರೆದುಕೊಂಡು ಬಂದಳು. ಅಲ್ಲಿ ಆತನಿಗೆ ಪ್ರಥಮ ಚಿಕಿತ್ಸೆಯನ್ನೂ ಆಕೆಯೇ ನೀಡಿದಳು. ಆತನ ಎದೆ ಬಡಿತ, ನಾಡಿ ಬಡಿತ ಎಲ್ಲವನ್ನೂ ಪರಿಶೀಲಿಸಿ ಆತನ ಜೀವ ರಕ್ಷಣೆ ಮಾಡಲು ಸತತ ಪ್ರಯತ್ನ ಮಾಡಿದಳು. ಆದರೆ ದುರದೃಷ್ಟವಶಾತ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲಿ ಆತ ಕೊನೆಯುಸಿರೆಳೆದ.
ದಾಲಿಯಾನ್ ಸೆಂಟ್ರಲ್ ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಿರುವ ಗುವಾ ಮದುವೆಯ ಡ್ರೆಸ್‌ನಲ್ಲೇ ನೀರಿಗೆ ಬಿದ್ದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವ ವೀಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.