ಅಂತರಾಷ್ಟ್ರೀಯ

ಅಂತರ್ಜಾಲವನ್ನು ಸಮುದ್ರದಲ್ಲೂ ವಿಸ್ತರಿಸಲಿದೆ ಗೂಗಲ್ ನ ಬ’ಲೂನ್’ ಪ್ರಾಜೆಕ್ಟ್

Pinterest LinkedIn Tumblr

loon_project– ಶ್ರೀಹರ್ಷ ಸಾಲಿಮಠ
ಇಂಟರ್ ನೆಟ್ ವಿಶ್ವವ್ಯಾಪಿ. ಹಳ್ಳಿ ಹಳ್ಳಿಗಳಲ್ಲೂ ಇದು ವ್ಯಾಪಿಸಿದೆ. ಒಂದು ಕೊರತೆಯೆಂದರೆ ಜನವಸತಿಯಿರುವ ಪ್ರದೇಶದಲ್ಲಿ ಮಾತ್ರ ಇಂಟರ್ ನೆಟ್ ಸಿಗುತ್ತದೆ. ದಟ್ಟಾರಣ್ಯಗಳು, ಸಮುದ್ರದ ನಡುವೆ, ಅಗಲವಾದ ನದಿ ಪಾತ್ರಗಳು, ಹಿಮವತ್ ಪರ್ವತಗಳು, ಧ್ರುವಗಳು ಇತ್ಯಾದಿ ಪ್ರದೇಶಗಳಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಗಳನ್ನು ಎಳೆಯುವುದು ಅಸಾಧ್ಯವಾದ ಮಾತು. ಇಂತಹ ಕಡೆಗಳಲ್ಲಿ ಕೃತಕ ಉಪಗ್ರಹಗಳ ಮೂಲಕ ಅಂತರ್ಜಾಲ ಸಂಪರ್ಕ ಕೊಡುವುದು ದುಬಾರಿ ಬಾಬ್ತು.  ಇದಕ್ಕಾಗಿ ಹುಡುಕಾಟದ ಇಂಜಿನ್ ನ ಗೂಗಲ್ ಒಂದು ಹೊಸ ಉಪಾಯವನ್ನು ಕಂಡುಕೊಂಡಿದೆ. ಅದರ ಹೆಸರು “ಲೂನ್ ಪ್ರಾಜೆಕ್ಟ್”! ಗೂಗಲ್ ವಿಶ್ವದ ಪ್ರತಿ ಇಂಚನ್ನೂ ಇಂಟರ್ ನೆಟ್ ಸಂಪರ್ಕಕಕ್ಕೊಳಪಡಿಸಲು ಹಾರುವ ಬಲೂನುಗಳನ್ನು ಸಿದ್ಧಪಡಿಸಿಟ್ಟುಕೊಂಡಿದೆ. ಈ ಬಲೂನುಗಳು ನೆಲದಿಂದ ಸುಮಾರು ಮೂವತ್ತೆರಡು ಕಿಲೋಮೀಟರುಗಳಷ್ಟು ಎತ್ತರಕ್ಕೆ ಹಾರುತ್ತಿರುತ್ತವೆ. ಹಾರಾಟದ ವೇಗ ಮತ್ತು ದಿಕ್ಕನ್ನು ಕಂಪ್ಯೂಟರ್ ಮುಖಾಂತರ ನಿಯಂತ್ರಿಸಬಹುದು. ಒಂದು ಬಲೂನು ಸುಮಾರು ಐದು ಸಾವಿರ ಚದರ ಕಿಲೋಮೀಟರುಗಳಷ್ಟು ವ್ಯಾಪ್ತಿಯ ನೆಲಕ್ಕೆ ಇಂಟರ್ ನೆಟ್ ಸಂಪರ್ಕ ಒದಗಿಸಲಿದೆ ಎಂದು ಹೇಳಲಾಗುತ್ತದೆ. ಇದು ಸೌರಶಕ್ತಿಯಿಂದ ತನಗೆ ಬೇಕಾದ ವಿದ್ಯುತ್ತನ್ನು ಉತ್ಪಾದಿಸಿಕೊಳ್ಳಲಿದೆ. ವಾಯುಮಂಡಲದಲ್ಲಿ ಗಾಳಿಯ ವೇಗ ಗಂಟೆಗೆ 5 ಕಿ ಮೀ ಯಿಂದ 10 ಕಿಮೀ ಇರುವ ಎತ್ತರದಲ್ಲಿ ಈ ಬಲೂನುಗಳು ಹಾರಾಡಲಿವೆ.

ಈ ಬಲೂನುಗಳು ನಮ್ಮ ಮೊಬೈಲುಗಳ ಹಾಗೆ ನಿಸ್ತಂತು ಅಂದರೆ ವೈರ್ ಲೆಸ್ ಮುಖಾಂತರ ಇಂಟರ್ ನೆಟ್ ಸೇವೆಯನ್ನು ಒದಗಿಸಲಿವೆ. 3G ಯ ವೇಗದಲ್ಲಿ ಇಂಟರ್ ನೆಟ್ ಸಂಪರ್ಕವನ್ನು ಇವು ಕೊಡಬಲ್ಲವು. ಗೂಗಲ್ ಈ ಬಲೂನುಗಳನ್ನು ಇನ್ನೊಂದಿಷ್ಟು ತಾಂತ್ರಿಕವಾಗಿ ಉನ್ನತ ಮಟ್ಟಕ್ಕೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದು, ಗಾಳಿ, ಮಳೆ ಅಥವಾ ಸಿಡಿಲಿನಂತಹ ಅವಘಡಗಳಿಂದ ರಕ್ಷಿಸಿಕೊಳ್ಳಲು, ಅಕಸ್ಮಾತಾಗಿ ನಿಯಂತ್ರಣ ತಪ್ಪಿ ದಾರಿ  ತಪ್ಪಿದರೆ ವಾಪಸು ದಾರಿಗೆ ತರಲು, ಕಳೆದು ಹೋದ ಬಲೂನನ್ನು ಹುಡುಕಲು ತಕ್ಕ ತಂತ್ರಜ್ಞಾನ ವನ್ನು ಬೆಳೆಸಿಕೊಳ್ಳುತ್ತಿವೆ.
ಈ ಬಲೂನುಗಳನ್ನು ಬಲವಾದ ಪಾಲಿಥಿನ್ ಹಾಳೆಗಳಿಂದ ತಯಾರಿಸಲಾಗಿದ್ದು ಹಿಲಿಯಮ್ ಅನಿಲವನ್ನು ತುಂಬಿಸಲಾಗಿರುತ್ತದೆ. 49 ಅಡಿ ಉದ್ದ ಮತ್ತು 39 ಅಡಿ ಅಗಲದ ಈ ಬಲೂನಿನ ಕೆಳಭಾಗದಲ್ಲಿ ರೇಡಿಯೋ ಅಂಟೆನಾ, ನಿಯಂತ್ರಣ ಪೆಟ್ಟಿಗೆ, ಸೋಲಾರ್ ವಿದ್ಯುಚ್ಛಕ್ತಿ ಉತ್ಪಾದಕ, ಬ್ಯಾಟರಿ ಇತ್ಯಾದಿಗಳನ್ನು ಅಳವಡಿಸಲಾಗಿರುತ್ತದೆ. ಇದಲ್ಲದೇ ಬಲೂನಿಗೆ ಹಾನಿಯಾದರೆ ಉಳಿದ ಯಂತ್ರಗಳ ಸಹಜ ಇಳಿಯುವಿಕೆಗಾಗಿ ಸ್ವಯಂ ಚಾಲಿತ ಪ್ಯಾರಾಚೂಟ್ ಗಳನ್ನೂ ಸಹ ಅಳವಡಿಸಲಾಗಿರುತ್ತದೆ.
ಈಗಾಗಲೇ ಈ ಬಲೂನುಗಳು ಪರೀಕ್ಷಾರ್ಥವಾಗಿ ನ್ಯೂಜಿಲೆಂಡ್ ನ ದ್ವೀಪಗಳ ಮೇಲೆ ಹಿಂದೂ ಮಹಾಸಾಗರದ ಮಧ್ಯೆ ಹಾರಾಡುತ್ತಿವೆ. ಅಲ್ಲಿ ದೋಣಿಗಳಲ್ಲಿ ಮೀನು ಹಿಡಿಯುವ ಹಡಗುಗಳಲ್ಲಿ ಸಂಚರಿಸುವವರೆಲ್ಲ ಈ ಬಲೂನುಗಳ ಮುಖಾಂತರ ಇಂಟರ್ ನೆಟ್ ಸಂಪರ್ಕವನ್ನು ಪಡೆಯಲು ಆರಂಭಿಸಿದ್ದಾರೆ.  ಇದೇ ದಶಕದಲ್ಲಿ ಈ ತಂತ್ರಜ್ಞಾನವು ವಾಣಿಜ್ಯ ಉದ್ದೇಶಕ್ಕಾಗಿ ಮಾರುಕಟ್ಟೆ ಪ್ರವೇಶಿಸುವ ಎಲ್ಲ ಸಾಧ್ಯತೆಗಳಿದ್ದು ಅತಿ ದೊಡ್ಡ ಬಳಕೆದಾರರ ಸಂಖ್ಯೆಯನ್ನು ಹೊಂದಿರುವ ಭಾರತಕ್ಕೂ ಕಾಲಿಡುವ ಲಕ್ಷಣಗಳು ಕಾಣಿಸುತ್ತಿವೆ. ಇದೊಂದು ಸಾಧ್ಯತೆ ನಮ್ಮೆದುರಿಗೆ ಬಂದು ನಿಂತಲ್ಲಿ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ನಡುವಿನಿಂದ ಹಿಮಾಲಯದ ಚಾರಣಿಗರ ವರೆಗೆ ಎಲ್ಲರಿಗೂ ಒಂದೇ ವೇಗದಲ್ಲಿ ಅನಾಯಾಸವಾಗಿ ಇಂಟರ್ ನೆಟ್ ಲಭ್ಯವಾಗಲಿದೆ. ಈಗಾಗಲೇ ಸರ್ಚ್ ಇಂಜಿನ್ ಮುಖಾಂತರ ಸೈಬರ್ ಜಗತ್ತಿನಲ್ಲಿ ತನ್ನ ಹಿಡಿತವನ್ನು ಸ್ಥಾಪಿಸಿಕೊಂಡಿರುವ ಗೂಗಲ್ ಕಂಪನಿ ಏಳು ಸಾಗರಗಳಿಗೂ, ಏಳು ಪರ್ವತಗಳಿಗೂ ತನ್ನ ಹಿಡಿತವನ್ನು ವ್ಯಾಪಿಸಿಕೊಳ್ಳಲು ಸಿದ್ಧವಾಗಿ ನಿಂತಿದೆ.

Write A Comment