ಅಂತರಾಷ್ಟ್ರೀಯ

ಸೌದಿ ಅರೇಬಿಯ: ತಾಯ್ನಡಿಗೆ ಮರಳುವ ಯತ್ನದಲ್ಲಿ ಕೇರಳದ 50 ನರ್ಸ್‌ಗಳು

Pinterest LinkedIn Tumblr

yeman ರಿಯಾದ್, ಸೆ.21: ಯಮನ್ ಹಿಂಸಾಚಾರ ಪೀಡಿತ ಪ್ರದೇಶದಿಂದ ಭಾರತಕ್ಕೆ ಹಿಂದಿರುಗಲು ನಿರ್ಧರಿಸಿರುವ ಕೇರಳದ 50 ಮಂದಿ ನರ್ಸ್‌ಗಳು ತಮ್ಮ ಸೇವಾನುಭವ ಮತ್ತು ವೃತ್ತಿ ಪ್ರಮಾಣ ಪತ್ರ ಸಮಸ್ಯೆ ಬಗೆಹರಿಸುವಂತೆ ಸೌದಿ ಅರೇಬಿಯ ಹಾಗೂ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಸೌದಿ ಅರೇಬಿಯದ ಹಿಂಸಾಪೀಡಿತ ಪ್ರದೇಶ ಸಮ್ತಾ ಪ್ರಾಂತದ ಗಡಿಪ್ರದೇಶದಿಂದ ರವಿವಾರ ರಾತ್ರಿ ಈ ನರ್ಸ್‌ಗಳನ್ನು ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯಮನ್‌ನ ಗಡಿಗೆ ಅತಿ ಸಮೀಪದಲ್ಲಿರುವ ಈ ಪ್ರದೇಶದಲ್ಲಿ ಶೆಲ್ ದಾಳಿಗಳು ನಿರಂತರವಾಗಿ ನಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ.
‘‘ಭೀಕರ ಶೆಲ್ ದಾಳಿ ನಡೆಯುತ್ತಿರುವ ಈ ಪ್ರದೇಶದ ಸಮೀಪದಲ್ಲಿರುವ 150 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯೊಂದರಲ್ಲಿ ಕಳೆದ ಮೂರು ದಿನಗಳಿಂದ ನಾವು ಪ್ರಾಣ ಭಯದಿಂದಲೇ ಕಾಲ ಕಳೆದಿದ್ದೇವೆ. ನಮ್ಮಲ್ಲಿ ಸುಮಾರು 50 ಮಂದಿ ನರ್ಸ್‌ಗಳು ತಾಯ್ನಾಡಿಗೆ ಮರಳಲು ನಿರ್ಧರಿಸಿದ್ದೇವೆ. ಇದು ನಮ್ಮ ಕೆಲಸದ ಕೊನೆಯ ದಿನವಾಗಿದೆ’’ ಎಂದು ಹಿಂದಿರುಗಲು ಪರವಾನಿಗೆಗಾಗಿ ಕಾಯುತ್ತಿರುವ ಜಿಝಾನ್ ಪ್ರದೇಶದಿಂದ ಮಾಡಿರುವ ದೂರವಾಣಿ ಕರೆಯೊಂದರಲ್ಲಿ ಕೇರಳ ಮೂಲದ ನರ್ಸ್ ಟಿ. ತನು ಎಂಬವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
‘‘ನಮಗೆ ಅನುಭವ ಪ್ರಮಾಣ ಪತ್ರಗಳು ಹಾಗೂ ಹೊಸದಾಗಿ ನೇಮಕಗೊಂಡಿರುವವರಿಗೆ ಅವರ ಪ್ರಮಾಣ ಪತ್ರಗಳನ್ನು ಹಿಂದೆ ಪಡೆಯುವಲ್ಲಿ ಸಹಕಾರ ನೀಡುವಂತೆ ಭಾರತೀಯ ದೂತಾವಾಸವನ್ನು ನಾವು ಕೇಳಿಕೊಳ್ಳುತ್ತಿದ್ದೇವೆ’’ ಎಂದು ಕೇರಳದ ತ್ರಿಶೂರ್‌ನ ಟಿ. ತನು ಹೇಳಿದ್ದಾರೆ.

ಶೆಲ್ ದಾಳಿಗೆ ಓರ್ವ ಭಾರತೀಯ ಬಲಿ
ಜಿದ್ದಾ, ಸೆ.21: ಸೌದಿ ಅರೇಬಿಯದ ಜಿಝಾನ್ ಪ್ರಾಂತದಲ್ಲಿ ಹೌದಿ ಬಂಡುಕೋರರು ರವಿವಾರ ನಡೆಸಿದ ಶೆಲ್ ದಾಳಿಗೆ ಓರ್ವ ಭಾರತೀಯ ಪ್ರಜೆ ಬಲಿಯಾಗಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಮೃತಪಟ್ಟಿರುವ ಭಾರತೀಯನನ್ನು ಸಮ್ತಾ ನಗರದಲ್ಲಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವಿಷ್ಣು ಎಂದು ಗುರುತಿಸಲಾಗಿದೆ.
ಯಮನ್‌ನಲ್ಲಿ ಸೌದಿ ನೇತೃತ್ವ ಮೈತ್ರಿಪಡೆಯ ದಾಳಿಗೆ ಪ್ರತೀಕಾರವಾಗಿ ಹೌದಿ ಬಂಡುಕೋರರು ಸೌದಿ ಅರೇಬಿಯದ ವಿರುದ್ಧ ಭೀಕರ ಶೆಲ್ ದಾಳಿಗಳನ್ನು ನಡೆಸತೊಡಗಿದ್ದಾರೆ.
ಇದೇ ರೀತಿಯ ದಾಳಿಯೊಂದರಲ್ಲಿ ಶುಕ್ರವಾರ ಭಾರತೀಯನೋರ್ವನು ಮೃತಪಟ್ಟಿದ್ದು, ಇತರ ಇಬ್ಬರು ಗಾಯಗೊಂಡಿದ್ದರು.

Write A Comment