ಅಂತರಾಷ್ಟ್ರೀಯ

ದ್ವಿಪಕ್ಷೀಯ ಸಂಬಂಧವೃದ್ಧಿ: ತಿಳುವಳಿಕೆ ಒಪ್ಪಂದಗಳಿಗೆ ಭಾರತ-ಲಾವೊಸ್ ಸಹಿ

Pinterest LinkedIn Tumblr

hamidವಿಯೆಂಟಿಯಾನ್, ಸೆ.18: ಭಾರತ ಹಾಗೂ ಲಾವೊಸ್ ಶುಕ್ರವಾರ ಎರಡು ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಒಂದು ತಿಳುವಳಿಕೆ ಒಪ್ಪಂದವು ಭಾರತ ಹಾಗೂ ಲಾವೊಸ್ ನಡುವಿನ ವಾಯುಯಾನ ಸೇವೆಗಳಿಗೆ ಸಂಬಂಧಿಸಿದ್ದು, ಇನ್ನೊಂದು ಮೆಕಾಂಗ್ ಗಂಗಾ ಯೋಜನೆಯಡಿ ಪ್ರಮುಖ ಯೋಜನೆಗಳ ಅಳವಡಿಕೆಯಿಂದ ಆಗಬಹುದಾದ ತ್ವರಿತ ಪರಿಣಾಮಗಳ ವಿಶ್ಲೇಷಣೆಗೆ ಸಂಬಂಧಿಸಿದೆ. ಭಾರತದ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಸಮ್ಮುಖದಲ್ಲಿ ಶುಕ್ರವಾರ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಸಹಿ ಹಾಕುವ ವೇಳೆ ಕೇಂದ್ರ ಜಲಸಂಪನ್ಮೂಲ ಸಹಾಯಕ ಸಚಿವ ಸನ್ವಾರ್ ಲಾಲ್‌ಜತ್ ಕೂಡಾ ಉಪಸ್ಥಿತರಿದ್ದರು.

ಭಾರತದ ಉಪರಾಷ್ಟ್ರಪತಿಯವರಿಗೆ ಶುಕ್ರವಾರ ಮುಂಜಾನೆ ಅಧ್ಯಕ್ಷೀಯ ಅರಮನೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಗೌರವ ರಕ್ಷೆ ನೀಡಲಾಯಿತು. ಆ ಬಳಿಕ ಅನ್ಸಾರಿಯವರು ಲಾವೊಸ್‌ನ ಉಪಾಧ್ಯಕ್ಷ ಡೌನ್‌ಯಾಂಗ್ ವೊರಾಚಿತ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಲಾವೊಸ್ ಅಧ್ಯಕ್ಷ ಚೌಮಾಲಿ ಸೇಸೋನ್‌ರ ಜೊತೆಗೆ ಅನ್ಸಾರಿ ಮಾತುಕತೆ ನಡೆಸಿದರು. ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಬಲಪಡಿಸುವುದು ತಮ್ಮ ಉದ್ದೇಶವೆಂದು ಹಾಮಿದ್ ಅನ್ಸಾರಿ ಇದೇ ವೇಳೆ ಲಾವೊಸ್‌ನ ಮುಖಂಡರಿಗೆ ತಿಳಿಸಿದರು.

ಲಾವೊಸ್‌ನ ಪ್ರಸಿದ್ಧ ಸ್ತೂಪಕ್ಕೂ ಅನ್ಸಾರಿ ಭೇಟಿ ನೀಡಿದರು. ಈ ಸ್ತೂಪವು ಲಾವೊಸ್‌ನ ಒಂದು ರಾಷ್ಟ್ರೀಯ ಸಂಕೇತವಾಗಿದ್ದು, ರಾಷ್ಟ್ರದ ಅತ್ಯಂತ ಪವಿತ್ರ ಸ್ಮಾರಕವೆಂದು ಭಾವಿಸಲಾಗಿದೆ. ಲಾವೊಸ್‌ನ ಉಪ ಪ್ರಧಾನಿ ಹಾಗೂ ಉಪಾಧ್ಯಕ್ಷರನ್ನು ಭೇಟಿಯಾಗಿ ನಡೆಸಿದ ಮಾತುಕತೆಯ ಬಳಿಕ ಹಾಮಿದ್ ಅನ್ಸಾರಿಯವರು ತನ್ನ ಎರಡು ದಿನಗಳ ಲಾವೊಸ್ ಪ್ರವಾಸವನ್ನು ಮುಕ್ತಾಯಗೊಳಿಸಿದರು.

Write A Comment