ಅಂತರಾಷ್ಟ್ರೀಯ

ಗಡಿಯಾರ ತಯಾರಿಸಿದ ಬಾಲಕನ ಬಂಧನ: ನಿಜಾಂಶ ತಿಳಿದ ಬಳಿಕ ಒಬಾಮ ಆತಿಥ್ಯ

Pinterest LinkedIn Tumblr

handcuffವಾಷಿಂಗ್ಟನ್, ಸೆ.18: ತಾನು ಮನೆಯಲ್ಲೇ ತಯಾರಿಸಿದ ಡಿಜಿಟಲ್ ಗಡಿಯಾರವನ್ನು ಅಧ್ಯಾಪಕರಿಗೆ ತೋರಿಸಿ ಮೆಚ್ಚುಗೆ ಪಡೆದುಕೊಳ್ಳಬೇಕೆಂಬ ಹಂಬಲದೊಂದಿಗೆ ಡಲಾಸ್ ಹೈಸ್ಕೂಲ್‌ನ ವಿದ್ಯಾರ್ಥಿ 14ರ ಹರೆಯದ ಅಹ್ಮದ್ ಮುಹಮ್ಮದ್ ಶಾಲೆಗೆ ತೆರಳಿದ್ದ. ಆದರೆ ಅಧ್ಯಾಪಕರು ಬಾಲಕನು ಬಾಂಬ್ ತಯಾರಿಸಿ ಶಾಲೆಗೆ ತಂದಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರಲ್ಲದೆ ಆತನನ್ನು ಶಾಲೆಯಿಂದ ಅಮಾನತುಗೊಳಿಸಿದ್ದರು. ಪರಿಣಾಮ ಆತನ ಕೈಗೆ ಪೊಲೀಸರು ಕೋಳ ತೊಡಿಸಿ ಕರೆ ದೊಯ್ದಿದ್ದರು. ಆದರೆ ಘಟನೆಯ ನಿಜಾಂಶ ಬಹಿರಂಗಗೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ವಿವಾದಗಳು ನಡೆದಿವೆ.
ಈ ನಡುವೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಬಾಲಕನಿಗೆ ಶ್ವೇತಭವನಕ್ಕೆ ಬಂದು ಆತಿಥ್ಯ ಪಡೆಯಲು ಪತ್ರವೊಂದನ್ನು ಬರೆದಿದ್ದಾರೆ.
ಹಿಲರಿ ಕ್ಲಿಂಟನ್ ಹಾಗೂ ಫೇಸ್‌ಬುಕ್ ಒಡೆಯ ಮಾರ್ಕ್ ಝುಕರ್‌ಬರ್ಗ್ ಬೆಂಬಲದೊಂದಿಗೆ ಬಾಲಕನೀಗ ಒಬಾಮರ ಆಹ್ವಾನಕ್ಕೆ ಪಾತ್ರನಾಗಿದ್ದಾನೆ.
ಇದೀಗ ಬಾಲಕ ತಯಾರಿಸಿರುವ ಗಡಿಯಾರದ ಬಗ್ಗೆ ಸ್ವತ: ಟ್ವಿಟರ್‌ನಲ್ಲಿ ಪ್ರಶಂಸಿಸಿದ್ದಾರೆ.
‘‘ಕೂಲ್ ಕ್ಲಾಕ್ ಮುಹಮ್ಮದ್, ನೀನು ತಯಾರಿಸಿರುವ ಗಡಿಯಾರವನ್ನು ಶ್ವೇತಭವನಕ್ಕೆ ತರಲಿಚ್ಛಿಸುವೆಯಾ? ವಿಜ್ಞಾನವನ್ನು ಪ್ರೀತಿಸುವಂತಹ ನಿನ್ನಂತಹ ಮಕ್ಕಳನ್ನು ನಾವು ಪ್ರೋತ್ಸಾಹಿಸಬೇಕಾಗಿದೆ. ಅಮೆರಿಕವನ್ನು ಅದು ಎತ್ತರಕ್ಕೇರಿಸುತ್ತದೆ’’ ಎಂದು ಒಬಾಮ ಟ್ವೀಟ್ ಮಾಡಿದ್ದಾರೆ.
ಅಕ್ಟೋಬರ್ 19ರಂದು ಬಾಲಕ ಮುಹಮ್ಮದ್ ಅಧ್ಯಕ್ಷ ಒಬಾಮರನ್ನು ಶ್ವೇತಭವನದಲ್ಲಿ ಭೇಟಿಯಾಗಲು ಆಹ್ವಾನ ಪಡೆದಿದ್ದಾನೆ. ಅಂದು ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ವಿಜ್ಞಾನಿಗಳು, ಎಂಜಿನಿಯರ್‌ಗಳು, ಖಗೋಲ ತಜ್ಞರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಅಮೆರಿಕವು ಇಸ್ಲಾಮಿಕ್ ಭಯೋತ್ಪಾದಕರ ವಿರುದ್ಧ ಪ್ರಬಲ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲೇ ಈ ಬಾಲಕನ ಹೆಸರನ್ನು ಆಧರಿಸಿ ಪೂರ್ವಗ್ರಹಿಕೆಯಿಂದ ಬಾಲಕನನ್ನು ಬಂಧಿಸಲಾಗಿದೆ ಎಂದು ಅಧ್ಯಕ್ಷರ ವಕ್ತಾರರು ಹೇಳಿದ್ದಾರೆ.

ಇಸ್ಲಾಮೋಫೋಬಿಯ: ಘಟನೆಯ ವಿವರ
ಮನೆಯಲ್ಲೇ ಸಂಶೋಧನೆ ನಡೆಸಿ ತಯಾರಿಸಿದ ಡಿಜಿಟಲ್ ಗಡಿಯಾರದೊಂದಿಗೆ 9ನೆ ತರಗತಿ ವಿದ್ಯಾರ್ಥಿ ಮುಹಮ್ಮದ್ ಸೋಮವಾರ ಟೆಕ್ಸಾಸ್‌ನ ಇರ್ವಿಂಗ್‌ನಲ್ಲಿರುವ ಮೆಕ್‌ಆರ್ಥರ್ ಹೈಸ್ಕೂಲ್‌ಗೆ ತೆರಳಿದ್ದನು. ಡಿಜಿಟಲ್ ಗಡಿಯಾರವನ್ನು ಬಾಂಬ್ ಎಂದು ತಪ್ಪಾಗಿ ಗ್ರಹಿಸಿದ್ದ ಅಧ್ಯಾಪಕರು ಪೊಲೀಸರಿಗೆ ದೂರು ನೀಡಿದ್ದರು ಮತ್ತು ಪೊಲೀಸರು ಆತನ ಕೈಗೆ ಕೋಳ ತೊಡಿಸಿ ವಿಚಾರಣೆಗೊಳಪಡಿಸಿದ್ದರು.

ಈ ಘಟನೆ ಜನಾಂಗೀಯವಾಗಿ ಗುರಿಯಾಗಿಸಿ ಮಾಡಿದ ಆರೋಪ ಎಂಬುದಾಗಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಬಳಿಕ ನಾಸಾ ಲಾಂಛನ ಟಿ ಶರ್ಟ್ ಹಾಕಿಕೊಂಡಿದ್ದ ಹಾಗೂ ಕೈಕೋಳ ತೊಡಿಸಿದ್ದ ಮುಹಮ್ಮದ್ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಲಕ್ಷಾಂತರ ಮಂದಿ ಬಾಲಕನಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ದೋಷಾರೋಪವಿಲ್ಲ: ಪೊಲೀಸ್ ಮುಖ್ಯಸ್ಥ
ಬಾಲಕ ಮುಹಮ್ಮದ್ ವಿರುದ್ಧ ನಾವು ಯಾವುದೇ ಆರೋಪ ದಾಖಲಿಸಿಲ್ಲ. ಮಾತ್ರವಲ್ಲದೆ, ಈಪ್ರಕರಣವನ್ನು ಇಲ್ಲಿಗೇ ಮುಕ್ತಾಯಗೊಳಿಸಲಾಗಿದೆ ಎಂದು ಇರ್ವಿಂಗ್ ಪೊಲೀಸ್ ವರಿಷ್ಠಾಧಿಕಾರಿ ಲಾರೈ ಬಾಯ್ಡಾ ತಿಳಿಸಿದ್ದಾರೆ.
ಆ ವಿದ್ಯಾರ್ಥಿಯು ಗಡಿಯಾರ ತಯಾರಿಸುವ ಉದ್ದೇಶ ಹೊಂದಿದ್ದನೋ ಇಲ್ಲವೋ ಎಂಬುದನ್ನು ಸಮರ್ಥಿಸಲು ನಮ್ಮಲ್ಲಿ ಯಾವುದೇ ಪುರಾವೆಯಿರಲಿಲ್ಲ. ಪರಿಶೀಲನೆ ನಡೆಸಿ ಆತನಿಂದ ಮಾಹಿತಿ ಪಡೆದ ಬಳಿಕ ಅನುಮಾನ ದೂರವಾಯಿತು ಎಂದವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಫೇಸ್‌ಬುಕ್ ಸ್ಥಾಪಕ ಝುಕರ್‌ಬರ್ಗ್ ಕೂಡಾ ಬಾಲಕನನ್ನು ಅಭಿನಂದಿಸಿ ಭೇಟಿಗೆ ಆಹ್ವಾನಿಸಿದ್ದಾರೆ. ನಾಸಾ ವಿಜ್ಞಾನಿಗಳು ಹಾಗೂ ಎಂಐಟಿ ಸಂಶೋಧಕರು ಕೂಡಾ ಬಾಲಕನಿಗೆ ಪ್ರವಾಸದ ಕೊಡುಗೆ ಪ್ರಕಟಿಸಿದ್ದಾರೆ.

Write A Comment