ಬೆಂಗಳೂರು, ಸೆ.18: ರಾಜ್ಯದಲ್ಲಿ ತಾಯಿ ಮರಣ ಹಾಗೂ ಶಿಶು ಮರಣ ಪ್ರಮಾಣವನ್ನು ಕಡಿಮೆಗೊಳಿಸಲು ದೇಶದಲ್ಲಿ ಮೊದಲ ಬಾರಿಗೆ ಗರ್ಭಿಣಿ ಮಹಿಳೆ ಮತ್ತು ಮಗುವಿನ ಆರೋಗ್ಯ ಅನುಸರಣೆಗಾಗಿ ವಾತ್ಸಲ್ಯವಾಣಿ ಸೇವೆಯನ್ನು ಜಾರಿಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.
ಶುಕ್ರವಾರ ನಗರದ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗರ್ಭ ಧರಿಸಿದ ಮಹಿಳೆಗೆ ಈ ಯೋಜನೆಯಡಿಯಲ್ಲಿ ಆರೈಕೆ ಆರಂಭಿಸಲಾಗುತ್ತದೆ. ಮಗು ಜನ್ಮ ತಾಳಿದ ಒಂದು ವರ್ಷದವರೆಗೆ ಸರಕಾರ ತಾಯಿ ಹಾಗೂ ಮಗುವಿಗೆ ಆರೋಗ್ಯ ಸೇವೆಯ ಬಗ್ಗೆ ಮಾಹಿತಿ ನೀಡಲಿದೆ ಎಂದರು.ತಾಯಿ-ಮಗುವಿಗೆ ಬೇಕಾದ ಆರೈಕೆ ಮತ್ತು ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೇವೆಯನ್ನು ಕಾಲಕಾಲಕ್ಕೆ ಕಡ್ಡಾಯವಾಗಿ ನೀಡಲಾಗುತ್ತಿದೆ. ಜೊತೆಗೆ ತಾಯಿ-ಮಗುವಿಗೆ ಷೌಷ್ಟಿಕ ಆಹಾರ ನೀಡುವ ಮೂಲಕ ಪೌಷ್ಟಿಕಾಂಶ ಕೊರತೆಯ ಸಮಸ್ಯೆಯನ್ನು ಈ ಸೇವೆಯಿಂದ ನಿವಾರಿಸಲಾಗುವುದು ಎಂದು ಹೇಳಿದರು.
ಈ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.21ರಂದು ನಗರದಲ್ಲಿರುವ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಚಾಲನೆ ನೀಡಲಿದ್ದು, ರಾಜ್ಯದಾದ್ಯಂತ ಶೀಘ್ರದಲ್ಲಿಯೇ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಯಾವುದೇ ಖಾತೆ ನೀಡಲಿ, ಸ್ವಾಗತ
ಸಿಎಂ ಸಿದ್ದರಾಮಯ್ಯ ಅವರು ಇದೇ ತಿಂಗಳ ಅಂತ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸೂಚಿಸಿದ್ದಾರೆ. ಈ ಬಗ್ಗೆ ನನಗೆ ಯಾವುದೇ ತಕರಾರಿಲ್ಲ. ಬೇರೆ ಯಾವುದೇ ಖಾತೆ ನೀಡಿದರೂ ಸ್ವಾಗತಿಸುತ್ತೇನೆ.
-ಯು.ಟಿ.ಖಾದರ್, ಆರೋಗ್ಯ ಸಚಿವ