ವಾಷಿಂಗ್ಟನ್,ಸೆ.15: ಸೇವಾ ಸಂಸ್ಥೆಯೊಂದರ ಮೂಲಕ ಇಂಟರ್‌ನೆಟ್ ಕೋಡಿಂಗ್ ತಂತ್ರಜ್ಞಾನವನ್ನು ಒದಗಿಸಿ ಸಾಮುದಾಯಿಕ ಬಲವರ್ಧನೆಗೆ ನೀಡಿರುವ ಕೊಡುಗೆಗಳಿಗಾಗಿ 15ರ ಹರೆಯದ ಭಾರತೀಯ ಮೂಲದ ಬಾಲಕಿ ಶ್ವೇತಾ ಪ್ರಭಾಕರನ್‌ಗೆ ಶ್ವೇತಭವನವು ‘ಚಾಂಪಿಯನ್ಸ್ ಆಫ್ ಚೇಂಜ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಥಾಮಸ್ ಜೆಫರ್ಸನ್ ಹೈಸ್ಕೂಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ಕಿರಿಯ ವಿದ್ಯಾರ್ಥಿನಿಯಾಗಿರುವ ಶ್ವೇತಾ ಪ್ರಭಾಕರನ್ ಅವರ ತಂದೆ ತಾಯಿ 1998ರಲ್ಲಿ ತಮಿಳುನಾಡಿನ ತಿರುನಲ್ವೇಲಿಯಿಂದ ಅಮೆರಿಕಕ್ಕೆ ವಲಸೆ ಬಂದಿದ್ದರು. ಯುವ ಮಹಿಳೆಯರಿಗೆ ಹಾಗೂ ಜಗತ್ತಿಗೆ ಸ್ಫೂರ್ತಿ ನೀಡುವ ರೀತಿಯಲ್ಲಿ ಸೇವೆ ಸಲ್ಲಿಸುವ ಕನಸು ಹೊಂದಿದ್ದಾರೆ.
‘ಚಾಂಪಿಯನ್ಸ್ ಆಫ್ ಚೇಂಜ್’ಪ್ರಶಸ್ತಿಗೆ ಶ್ವೇತಭವನವು ಆಯ್ಕೆ ಮಾಡಿರುವ 11 ಮಂದಿಯಲ್ಲಿ ಶ್ವೇತಾ ಕೂಡಾ ಒಬ್ಬಳಾಗಿದ್ದಾರೆ.
ಶ್ವೇತಾ ‘ಎವ್ರಿಬಡಿ ಕೋಡ್ ನೌ’ ಸೇವಾಸಂಸ್ಥೆಯ ಸ್ಥಾಪಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯುವಜನರನ್ನು ಎಂಜಿನಿಯರ್‌ಗಳು, ವಿಜ್ಞಾನಿಗಳು ಹಾಗೂ ಉದ್ಯಮಿಗಳನ್ನಾಗುವಂತೆ ಪ್ರೇರೇಪಿಸುವ ಮೂಲಕ ಮುಂದಿನ ತಲೆಮಾರಿನ ಸಬಲೀಕರಣದ ಧ್ಯೇಯವನ್ನು ಅವರ ಸಂಸ್ಥೆ ಇರಿಸಿಕೊಂಡಿದೆ. ಶ್ವೇತಾ ಅವರ ಮಾರ್ಗದರ್ಶನದಂತೆ ‘ಎವ್ರಿಡೇ ಕೋಡ್ ನೌ’ ಸಂಸ್ಥೆಯು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಎಂದು ಶ್ವೇತಭವನ ತಿಳಿಸಿದೆ.
ಕಂಪ್ಯೂಟರ್ ತಜ್ಞೆಯಾಗಿರುವ ಶ್ವೇತಾ ಭರತನಾಟ್ಯ ಕಲಾ
ವಿದೆಯೂ ಆಗಿದ್ದಾರೆ. ಶ್ವೇತಾರ ತಂದೆ ಟೆಕ್‌ಫೆಚ್.ಕಾಮ್‌ನ ಸಿಇಒ ಆಗಿದ್ದು, ವರ್ಜೀನಿಯದಲ್ಲಿ ನೆಲೆಸಿದ್ದಾರೆ.