ಜಿನೇವ, ಸೆ. 9: ಈ ವರ್ಷ ಮತ್ತು ಮುಂದಿನ ವರ್ಷ ಕನಿಷ್ಠ 8.5 ಲಕ್ಷ ಜನರು ಮೆಡಿಟರೇನಿಯನ್ ಸಮುದ್ರ ದಾಟಿ ಯುರೋಪ್‌ನಲ್ಲಿ ಆಶ್ರಯ ಕೋರಿ ಬರುತ್ತಾರೆ ಎಂದು ನಿರೀಕ್ಷಿಸಲಾಗಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.
ಹೆಚ್ಚುತ್ತಿರುವ ಸಂಖ್ಯೆಯ ನಿರಾಶ್ರಿತರ ಸಮಸ್ಯೆಯೊಂದಿಗೆ ವ್ಯವಹರಿಸಲು ಹೆಚ್ಚು ಉದಾರ ಆಶ್ರಯ ನೀತಿಗಳ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ (ಯುಎನ್‌ಎಚ್‌ಸಿಆರ್) ಹೇಳಿದೆ.
ಈ ಪೈಕಿ ಹೆಚ್ಚಿನ ನಿರಾಶ್ರಿತರು ಸಿರಿಯದವರು. ಸಿರಿಯದಲ್ಲಿ ತೀವ್ರಗೊಳ್ಳುತ್ತಿರುವ ಆಂತರಿಕ ಕಲಹದಿಂದ ದೇಶ ತೊರೆದವರು.
‘‘2015ರಲ್ಲಿ ಹೊಸದಾಗಿ ಸುಮಾರು 4 ಲಕ್ಷ ನಿರಾಶ್ರಿತರು ಯುರೋಪ್‌ನಲ್ಲಿ ಅಂತಾರಾಷ್ಟ್ರೀಯ ರಕ್ಷಣೆ ಕೋರಿ ಮೆಡಿಟರೇನಿಯನ್ ಸಮುದ್ರ ದಾಟಿ ಬರುತ್ತಾರೆ ಎಂದು ಯುಎನ್‌ಎಚ್‌ಸಿಆರ್ ಅಂದಾಜಿಸಿದೆ. 2016ರಲ್ಲಿ ಈ ಸಂಖ್ಯೆ 4.5 ಲಕ್ಷ ಅಥವಾ ಅದಕ್ಕೂ ಹೆಚ್ಚಾಗಬಹುದು’’ ಎಂದು ಮನವಿಯೊಂದರಲ್ಲಿ ಯುಎನ್‌ಎಚ್‌ಸಿಆರ್ ತಿಳಿಸಿದೆ.
ಈ ವರ್ಷದ ಅಂದಾಜು ಈಡೇರುವ ಸನಿಹದಲ್ಲಿದೆ; 3.66 ಲಕ್ಷ ನಿರಾಶ್ರಿತರು ಈಗಾಗಲೇ ತಲುಪಿದ್ದಾರೆ ಎಂದು ವಕ್ತಾರ ವಿಲಿಯಂ ಸ್ಪಿಂಡ್ಲರ್ ತಿಳಿಸಿದರು. ಉಷ್ಣತೆ ಶೀತಲಗೊಂಡಿರುವ ಹಾಗೂ ಸಮುದ್ರಗಳು ಹೆಚ್ಚು ಬಿರುಸಾಗಿರುವ ಹಿನ್ನೆಲೆಯಲ್ಲಿ ವಲಸಿಗರು ಏನು ಮಾಡುತ್ತಾರೆ ಎನ್ನುವುದರ ಆಧಾರದಲ್ಲಿ ಒಟ್ಟು ಸಂಖ್ಯೆ ನಿರ್ಧಾರಗೊಳ್ಳುತ್ತದೆ.
ಶೀತಲ ತಿಂಗಳುಗಳು ಎದುರಾಗುತ್ತಿದ್ದರೂ ಈವರೆಗೆ ನಿರಾಶ್ರಿತರ ಸಂಖ್ಯೆಯಲ್ಲಿ ಕಡಿಮೆಯೇನೂ ಆಗಿಲ್ಲ. ಈಗಾಗಲೇ 3.66 ಲಕ್ಷ ಮಂದಿ ಯುರೋಪ್‌ಗೆ ಆಶ್ರಯ ಕೋರಿ ಆಗಮಿಸಿದ್ದಾರೆ.
ಯುಗೊಸ್ಲಾವಿಯದ ಮಾಜಿ ರಿಪಬ್ಲಿಕ್ ಮೆಸಡೋನಿಯಕ್ಕೆ ಸೋಮವಾರ 7,000 ನಿರಾಶ್ರಿತರು ಬಂದಿದ್ದಾರೆ. ಇದು ಒಂದು ದಿನದ ದಾಖಲೆಯಾಗಿದೆ. ಅದೂ ಅಲ್ಲದೆ, 30,000 ಮಂದಿ ಗ್ರೀಸ್‌ನ ದ್ವೀಪಗಳಲ್ಲಿ ಇದ್ದಾರೆ.ಹೆಚ್ಚಿನವರು ಮೊದಲು ಗ್ರೀಸ್‌ಗೆ ಬರುತ್ತಾರೆ. ಬಳಿಕ ಬಾಲ್ಕನ್ಸ್ ಮೂಲಕ ಹಂಗೇರಿಗೆ ಬಂದು ಜರ್ಮನಿ ತಲುಪುತ್ತಾರೆ.
ನಿರಾಶ್ರಿತರನ್ನು ಸ್ವಾಗತಿಸಿದ ಮ್ಯೂನಿಕ್ ಜನತೆ
ಮ್ಯೂನಿಕ್: ಸಂಘರ್ಷ ಪೀಡಿತ ಮಧ್ಯ ಪ್ರಾಚ್ಯದಿಂದ ಯುರೋಪ್‌ಗೆ ವಲಸೆ ಬರುತ್ತಿರುವ ನಿರಾಶ್ರಿತರನ್ನು ಜರ್ಮನಿ ತೆರೆದ ಹೃದಯದಿಂದ ಸ್ವಾಗತಿಸುತ್ತಿದೆ. ಯುರೋಪ್ ಎದುರಿಸುತ್ತಿರುವ ನಿರಾಶ್ರಿತರ ಬಿಕ್ಕಟ್ಟು ನಿರ್ವಹಣೆಯಲ್ಲಿ ಜರ್ಮನಿ ವಿಶೇಷ ಪಾತ್ರ ವಹಿಸುತ್ತಿದೆ.
ಮ್ಯೂನಿಕ್‌ನ ಜನರು ಭಾರೀ ಸಂಖ್ಯೆಯಲ್ಲಿ ಹೊರಬಂದು ಪ್ರತಿ ದಿನ ಹಂಗೇರಿ ಮತ್ತು ಆಸ್ಟ್ರಿಯದಿಂದ ರೈಲುಗಳಲ್ಲಿ ಬರುತ್ತಿರುವ ನೂರಾರು ನಿರಾಶ್ರಿತರನ್ನು ಅಭಿನಂದಿಸುತ್ತಿದ್ದಾರೆ. ‘‘ನಿರಾಶ್ರಿತರಿಗೆ ಸ್ವಾಗತ’’ ಎಂಬ ಬರಹದ ಬ್ಯಾನರ್‌ಗಳನ್ನು ಹಿಡಿದ ಹಾಗೂ ಟಿ-ಶರ್ಟ್‌ಗಳನ್ನು ಧರಿಸಿದ ಯುವ ಜರ್ಮನ್ನರ ತಂಡವೊಂದು ನಿರಾಶ್ರಿತರನ್ನು ಸ್ವಾಗತಿಸಿತು.