ಇಸ್ಲಾಮಾಬಾದ್, ಸೆ.8: ಕಾಶ್ಮೀರ ವಿವಾದವು ಕಾರ್ಯಸೂಚಿಯಲ್ಲಿ ಇದ್ದಲ್ಲಿ ಮಾತ್ರವೇ ಪಾಕಿಸ್ತಾನವು ಭಾರತದೊಂದಿಗೆ ಮಾತುಕತೆ ನಡೆಸಲಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಝೀಝ್ ಮಂಗಳವಾರ ಪುನರುಚ್ಚರಿಸಿದ್ದಾರೆ.
ಕಾಶ್ಮೀರ ಸೇರಿದಂತೆ ಇತ್ಯರ್ಥವಾಗದೆ ಬಾಕಿಯುಳಿದಿರುವ ಎಲ್ಲ ವಿಷಯಗಳಿಗೆ ಸಂಬಂಧಿಸಿ ಉಭಯ ರಾಷ್ಟ್ರಗಳು ಮಾತುಕತೆ ನಡೆಸುವ ಅಗತ್ಯವಿದೆ ಎಂಬ ಪಾಕಿಸ್ತಾನದ ನಿಲುವಿಗೆ ಇಡೀ ಜಗತ್ತು ಬೆಂಬಲ ನೀಡಿದೆ ಎಂದವರು ಹೇಳಿರುವುದಾಗಿ ರೇಡಿಯೊ ಪಾಕಿಸ್ತಾನ್ ವರದಿ ಮಾಡಿದೆ.
ಭಾರತಕ್ಕೆ ಬೇಕಾಗಿರುವ ದಾವೂದ್ ಇಬ್ರಾಹೀಂ ಪಾಕ್ ನೆಲದಲ್ಲಿ ಅವಿತಿರುವುದಾಗಿ ಭಾರತ ಮಾಡುತ್ತಿರುವ ಆರೋಪವನ್ನು ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
ಈ ನಿಟ್ಟಿನಲ್ಲಿ ಪಾಕಿಸ್ತಾನವು ಭಾರತಕ್ಕೆ ಸೂಕ್ತ ಉತ್ತರ ನೀಡಲಿದೆ ಎಂದವರು ಹೇಳಿದ್ದಾರೆ.
‘‘ಪಾಕ್‌ನ ರೇಂಜರ್ ಮುಖ್ಯಸ್ಥರು ಹಾಗೂ ಭಾರತೀಯ ಗಡಿಭದ್ರತಾ ಪಡೆ(ಬಿಎಸ್‌ಎಫ್)ಯ ಕಮಾಂಡರ್ ನಡುವಿನ ಮಾತುಕತೆ ಬುಧವಾರ ಹೊಸದಿಲ್ಲಿಯಲ್ಲಿ ನಡೆಯಲಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಆತಂಕ ಕಡಿಮೆಗೊಳಿಸುವ ಸಂಬಂಧ ಮಾತುಕತೆ ನಡೆಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ’ ಎಂದವರು ವಿವರಿಸಿದ್ದಾರೆ.
2003ರ ಕದನ ವಿರಾಮ ಒಪ್ಪಂದವನ್ನು ಜಾರಿಗೊಳಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದಿರುವ ಸರ್ತಾಜ್ ಅಝೀಝ್, ಭಾರತವು ಹಿಂದಿನಿಂದಲೂ ಪಾಕ್ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದಲ್ಲಿ ಭಾರತದ ಮಧ್ಯಪ್ರವೇಶದ ಬಗ್ಗೆ ವಿಶ್ವಸಂಸ್ಥೆಗೆ ಸೂಕ್ತ ದಾಖಲೆಯನ್ನು ಒದಗಿಸಲಿರುವುದಾಗಿಯೂ ಅವರು ಇದೇ ವೇಳೆ ಹೇಳಿದ್ದಾರೆ.
ನರೇಂದ್ರ ಮೋದಿಯವರು ಪಾಕ್ ವಿರೋಧಿ ನಿಲುವಿನ ಮೂಲಕ ಚುನಾವಣೆಯಲ್ಲಿ ಜಯಗಳಿಸಿದ್ದರು ಮತ್ತು ಈಗ ಅವರು ಪಾಕ್‌ನೊಂದಿಗಿನ ಮಾತುಕತೆಗೆ ಶರತ್ತುಗಳನ್ನು ವಿಧಿಸಲು ಬಯಸುತ್ತಿದ್ದಾರೆ ಎಂದು ಸರ್ತಾಜ್ ಆರೋಪಿಸಿದ್ದಾರೆ.
ಕಾಶ್ಮೀರ ವಿವಾದದ ಬಗ್ಗೆ ಚರ್ಚಿಸಲು ಭಾರತ ನಿರಾಕರಿಸಿದ್ದ ಕಾರಣಕ್ಕಾಗಿ ಕಳೆದ ತಿಂಗಳು ನಿಗದಿಗೊಂಡಿದ್ದ ಉಭಯ ರಾಷ್ಟ್ರಗಳ ಭದ್ರತಾ ಸಲಹೆಗಾರರ ಭೇಟಿಯನ್ನು ರದ್ದುಪಡಿಸಲಾಗಿತ್ತು ಎಂದವರು ಹೇಳಿದ್ದಾರೆ.
ಭಾರತವು ಪೂರ್ವ ಶರತ್ತುಗಳಿಗೆ ಒತ್ತು ನೀಡಿದಲ್ಲಿ ಭಾರತ-ಪಾಕ್ ನಡುವಿನ ಮಾತುಕತೆ ನಡೆಯಲು ಸಾಧ್ಯವಿಲ್ಲ ಎಂದು ಚೀನಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪಾಕ್ ಪ್ರಧಾನಿಯವರಿಗೆ ವಿದೇಶಾಂಗ ವ್ಯವಹಾರ ಗಳ ವಿಶೇಷ ಸಹಾಯಕರಾಗಿರುವ ತಾರಿಕ್ ಫಾತಿಮಿ ಹೇಳಿದ್ದಾರೆ.
ಅಂತರಾಷ್ಟ್ರೀಯ