ವಾಷಿಂಗ್ಟನ್, ಸೆ.8: ಯುರೋಪ್‌ನಲ್ಲಿರುವ ಮಧ್ಯಪ್ರಾಚ್ಯ, ಆಫ್ರಿಕ ಹಾಗೂ ಏಶ್ಯದಿಂದ ಬಂದಿರುವ ಸಾವಿರಾರು ನಿರಾಶ್ರಿತರಿಗೆ ನೆರವು ನೀಡುವ ನಿಟ್ಟಿನಲ್ಲಿ ಸಂಘಟಿತ ಜಾಗತಿಕ ಯತ್ನದ ಅಗತ್ಯವಿದೆ ಎಂದು ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.
ಹೆಚ್ಚಿನ ಸಂಖ್ಯೆಯ ನಿರಾಶ್ರಿತರು ಸಿರಿಯ ಹಾಗೂ ಇರಾಕ್‌ನ ಐಸಿಸ್ ನಿಯಂತ್ರಣದ ಪ್ರದೇಶ ಗಳಿಂದ ಬಂದವರಾಗಿದ್ದಾರೆ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
‘‘ನಿರಾಶ್ರಿತರಿಗೆ ನಾವು ಜಾಗತಿಕವಾಗಿ ವ್ಯಾಪಕ ಸಹಕಾರ ನೀಡುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಅಮೆರಿಕವು ಖಂಡಿತವಾಗಿಯೂ ತಯಾರಿದೆ ಮತ್ತು ಪ್ರತಿಯೊಂದು ರಾಷ್ಟ್ರವೂ ಮುಂದೆ ಬರಬೇಕಾಗಿದೆ’’ ಎಂದವರು ಅಭಿಪ್ರಾಯಿಸಿದ್ದಾರೆ.
‘‘ಒಂದುವೇಳೆ ನಿರಾಶ್ರಿತರಿಗೆ ಈ ರಾಷ್ಟ್ರಗಳು ಭೌತಿಕವಾಗಿ ಹೆಚ್ಚಿನ ಆಸರೆ ನೀಡಲು ಸಾಧ್ಯವಾಗದಿದ್ದಲ್ಲಿ ಅವು ಹೆಚ್ಚುಹೆಚ್ಚು ಹಣಕಾಸಿನ ನೆರವು ನೀಡಬೇಕು’’ ಎಂದವರು ಹೇಳಿದ್ದಾರೆ.
ನಿರ್ದಿಷ್ಟವಾಗಿ ಪರ್ಶಿಯನ್ ಕೊಲ್ಲಿಯ ರಾಷ್ಟ್ರಗಳನ್ನು ಉಲ್ಲೇಖಿಸಿ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಈ ಹೇಳಿಕೆ ನೀಡಿದ್ದಾರೆ.
ಅಂತಹ ರಾಷ್ಟ್ರಗಳು ನಿರಾಶ್ರಿತರ ಹೊರೆಯನ್ನು ಅನುಭವಿಸುತ್ತಿರುವ ರಾಷ್ಟ್ರಗಳಲ್ಲಿ ಪುನರ್ವಸತಿ ವ್ಯವಸ್ಥೆಗೆ ಆರ್ಥಿಕ ನೆರವು ನೀಡಬೇಕಾಗಿದೆ ಎಂದವರು ಸಲಹೆ ನೀಡಿದ್ದಾರೆ.
ಯುರೋಪ್ ಖಂಡದಲ್ಲಿ ಈಗಾಗಲೇ 3,40,000ಕ್ಕೂ ಅಧಿಕ ನಿರಾಶ್ರಿತರು ಆಸರೆ ಬಯಸಿದ್ದು, ಅವರಿಗೆ ನೆರವು ನೀಡುವಲ್ಲಿ ಹೇಗೆ ಸಮಾನ ಜವಾಬ್ದಾರಿ ಹಂಚಿಕೊಳ್ಳಬೇಕೆಂಬುದರ ಬಗ್ಗೆ ಐರೋಪ್ಯ ರಾಷ್ಟ್ರಗಳು ಚರ್ಚಿಸುತ್ತಿರುವಂತೆಯೇ ಕ್ಲಿಂಟನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟರ್ಕಿ, ಜೋರ್ಡಾನ್ ಹಾಗೂ ಸಿರಿಯದಲ್ಲಿ ಶಿಬಿರಗಳಲ್ಲಿರುವ ಸುಮಾರು 20 ಸಾವಿರ ಸಿರಿಯನ್ ನಿರಾಶ್ರಿತರಿಗೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬ್ರಿಟನ್ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಿದೆ ಎಂದು ಅಲ್ಲಿನ ಪ್ರಧಾನಿ ಡೇವಿಡ್ ಕೆಮರೂನ್ ಸೋಮವಾರ ಘೋಷಿಸಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 24 ಸಾವಿರ ನಿರಾಶ್ರಿತರಿಗೆ ತನ್ನ ರಾಷ್ಟ್ರವು ಆಶ್ರಯ ಕಲ್ಪಿಸಲಿದೆ ಎಂದು ಫ್ರಾನ್ಸ್‌ನ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡ್ ಪ್ರಕಟಿಸಿದ್ದಾರೆ.
ಜರ್ಮನಿ ಸರಕಾರವೂ ನಿರಾಶ್ರಿತರಿಗೆ ಹೆಚ್ಚಿನ ನೆರವು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ 6.6 ಶತಕೋಟಿ ಯೂರೊ ನೆರವು ಪ್ರಕಟಿಸಿದೆ.ಮಾತ್ರವಲ್ಲದೆ, ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸುವ ಹಾಗೂ ಜರ್ಮನೇತರ ಭಾಷಿಗರಿಗೆ ಉದ್ಯೋಗ ನೀಡುವ ಸಂಬಂಧ ಕಾನೂನುಗಳನ್ನು ಸಡಿಲಿಸುವ ಬಗ್ಗೆಯೂ ಚಿಂತನೆ ನಡೆದಿದೆ.
2016ರಲ್ಲಿ 4.5 ಲಕ್ಷ ನಿರಾಶ್ರಿತರು: ಯುಎನ್‌ಎಚ್‌ಸಿಆರ್ ಅಂದಾಜು
ಜಿನೇವ, ಸೆ.8: ಮೆಡಿಟರೇನಿಯನ್‌ನಿಂದ ಯುರೋಪ್‌ವರೆಗಿನ ಪ್ರದೇಶಗಳಲ್ಲಿ ಈವರ್ಷ ನಿರಾಶ್ರಿತ ವಲಸಿಗರ ಸಂಖ್ಯೆಯು 4 ಲಕ್ಷ ದಾಟಲಿದ್ದು, ಮುಂದಿ ವರ್ಷದ ಅವಧಿಗೆ ಇದು 4.5 ಲಕ್ಷ ಅಥವಾ ಅದಕ್ಕಿಂತಲೂ ಅಧಿಕವಾಗಲಿದೆ ಎಂದು ವಿಶ್ವಸಂಸ್ಥೆಯಲ್ಲಿರುವ ನಿರಾಶ್ರಿತರಿಗೆ ಸಂಬಂಧಿಸಿದ ಘಟಕ(ಯುಎನ್‌ಎಚ್‌ಸಿಆರ್) ಅಂದಾಜಿಸಿದೆ.
ಯುಎನ್‌ಎಚ್‌ಸಿಆರ್ ಮಂಗಳವಾರ ಸಲ್ಲಿಸಿರುವ ಪ್ರಾಥಮಿಕ ತುರ್ತು ಮನವಿ ದಾಖಲೆಯಲ್ಲಿ ವಿವರಿಸಿದೆ. 2015ರ ಅವಧಿಯಲ್ಲಿ ಅಂತಾರಾಷ್ಟ್ರೀಯ ರಕ್ಷಣೆ ಕೋರಿ ಮೆಡಿಟರೇನಿಯನ್ ಮೂಲಕ ಯುರೋಪ್‌ಗೆ 4 ಲಕ್ಷ ನಿರಾಶ್ರಿತರು ಹೊಸದಾಗಿ ಆಗಮಿಸಬಹುದೆಂದು ಯುಎನ್‌ಎಚ್‌ಸಿಆರ್ ನಿರೀಕ್ಷಿಸಿದೆ. 2016ರಲ್ಲಿ ಈ ಪ್ರಮಾಣವೂ ಇನ್ನಷ್ಟು ಅಧಿಕಗೊಳ್ಳುವ ಸಾಧ್ಯತೆಯಿದೆ ಎಂದು ಅದು ಅಂದಾಜಿಸಿದೆ. 2015ರ ಇದುವರೆಗಿನ ಅವಧಿಯಲ್ಲಿ 3,66,000 ನಿರಾಶ್ರಿತರು ಈಗಾಗಲೇ ಯುರೋಪ್‌ಗೆ ಪ್ರವೇಶಿಸಿದ್ದಾರೆ ಎಂದು ಅದು ಹೇಳಿದೆ.