ಸಿಯೋಲ್, ಆ. 28: ಖ್ಯಾತ ಭಾರತೀಯ ಕೃಷಿ ವಿಜ್ಞಾನಿ ಡಾ. ಮೊದಡುಗು ವಿಜಯ ಗುಪ್ತರಿಗೆ ಶುಕ್ರವಾರ ಸುನ್‌ಹಾಕ್ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಪ್ರಶಸ್ತಿಯನ್ನು ಅವರು ಕಿರಿಬಾತಿ ಐಲ್ಯಾಂಡ್ಸ್‌ನ ಅಧ್ಯಕ್ಷರೊಂದಿಗೆ ಹಂಚಿಕೊಂಡಿದ್ದಾರೆ.
76 ವರ್ಷದ ಗುಪ್ತ ಭಾರತ, ಬಾಂಗ್ಲಾದೇಶ ಮತ್ತು ಹಲವಾರು ಆಗ್ನೇಯ ಏಶ್ಯದ ದೇಶಗಳಲ್ಲಿ ಜಲ ಕೃಷಿಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ.
ಗುಪ್ತ 10 ಲಕ್ಷ ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತವನ್ನು ಕಿರಿಬಾತಿ ಐಲ್ಯಾಂಡ್‌ನ ಅಧ್ಯಕ್ಷ ಅನೋಟೆ ಟಾಂಗ್ ಜೊತೆ ಹಂಚಿಕೊಂಡರು.
ಇಲ್ಲಿ ನಡೆದ ಭವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ವಾದ್ಯಂತದಿಂದ ಬಂದ ಗಣ್ಯರು ಭಾಗವಹಿಸಿದ್ದರು.
ಸಣ್ಣ ದ್ವೀಪ ರಾಷ್ಟ್ರಗಳಿಗೆ ಮಾರಕ ವಾಗುತ್ತಿರುವ ಇಂಗಾಲದ ಡೈ ಆಕ್ಸೈಡ್ ಹೊರಹೊಮ್ಮುವಿಕೆಯನ್ನು ತಡೆಯಲು ನಡೆಸುತ್ತಿರುವ ನಿರಂತರ ಹೋರಾಟಕ್ಕಾಗಿ ಪೆಸಿಫಿಕ್ ಸಾಗರದ ದ್ವೀಪ ರಾಷ್ಟ್ರದ ಮುಖ್ಯಸ್ಥ 63 ವರ್ಷದ ಟಾಂಗ್‌ಗೆ ಪ್ರಶಸ್ತಿ ನೀಡಲಾಗುತ್ತಿದೆ. ಸ್ವತಃ ಅವರ ದ್ವೀಪ ದೇಶವೇ 2050ರ ವೇಳೆಗೆ ಏರುತ್ತಿರುವ ಸಮುದ್ರ ನೀರಿನಿಂದ ಆವೃತಗೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ನೊಬೆಲ್ ಶಾಂತಿ ಪ್ರಶಸ್ತಿಗೆ ಪರ್ಯಾಯ ಎಂದು ಬಣ್ಣಿಸಲಾಗುವ ಪ್ರಶಸ್ತಿಯನ್ನು ದಕ್ಷಿಣ ಕೊರಿಯದ ಧಾರ್ಮಿಕ ನಾಯಕಿ ಡಾ. ಹಾಕ್ ಜಾ ಹಾನ್ ಮೂನ್ ಪ್ರದಾನ ಮಾಡಿದರು. ಅವರ ಪತಿ ದಿವಂಗತ ರೆವರೆಂಡ್ ಸುನ್ ಮ್ಯುಂಗ್ ಮೂನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದರು. ಜನರ ಉನ್ನತಿಗಾಗಿ ಬೃಹತ್ ಪ್ರಯತ್ನಗಳನ್ನು ನಡೆಸುವ ವ್ಯಕ್ತಿಗಳ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.
ಅಂತರಾಷ್ಟ್ರೀಯ