ರಾಷ್ಟ್ರೀಯ

ಔಷಧಿ ಅಂಗಡಿಗಳಿಂದ ವೈದ್ಯಕೀಯೇತರ ಸರಕುಗಳಿಗೆ ಶೀಘ್ರವೇ ಗೇಟ್‌ಪಾಸ್?

Pinterest LinkedIn Tumblr

medicineಹೊಸದಿಲ್ಲಿ, ಆ.28: ತನ್ನ ಮುಂದಿರುವ ಪ್ರಸ್ತಾವನೆಯೊಂದನ್ನು ಸರಕಾರವು ಅಂಗೀಕರಿಸಿದರೆ ಔಷಧಿ ಅಂಗಡಿಗಳಲ್ಲಿ ಈಗ ಕಂಡು ಬರುತ್ತಿರುವ ಶಿಶು ಆಹಾರ,ಸಾಬೂನು ಮತ್ತು ಪೂರಕ ಆಹಾರಗಳು ಶೀಘ್ರವೇ ಮಾಯವಾಗಬಹುದು.
ಶುಕ್ರವಾರ ಇಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಸಹಾಯಕ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಹಂಸರಾಜ್ ಗಂಗಾರಾಂ ಅಹಿರ್ ಅವರು,ಔಷಧಿ ಅಂಗಡಿಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಕಂಪೆನಿಗಳು ಗ್ರಾಹಕರ ವಿಶ್ವಾಸವನ್ನು ಗಳಿಸುತ್ತಿವೆ. ನೆಸ್ಲೆ ಸಿರಿಲ್ಯಾಕ್ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್‌ನ ಬೇಬಿ ಸೋಪ್‌ಗಳು ಅಥವಾ ಪೂರಕ ಆಹಾರಗಳಿರುವುದು ಔಷಧಿ ಅಂಗಡಿಗಳಲ್ಲಿ ಮಾರಾಟಕ್ಕಲ್ಲ. ಔಷಧಿ ಅಂಗಡಿಗಳು ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳನ್ನು ಹೊರತು ಪಡಿಸಿ ಇತರ ವಸ್ತುಗಳ ಮಾರಾಟ ಮಾಡುವುದನ್ನು ನಿರ್ಬಂಧಿಸುವ ಪ್ರಸ್ತಾವನೆಯೊಂದನ್ನು ನಾವು ಪರಿಶೀಲಿಸುತ್ತಿದ್ದೇವೆ. ಈ ಪ್ರಸ್ತಾವನೆಯಂತೆ ದೇಶದಲ್ಲಿಯ ಏಳು ಲಕ್ಷಕ್ಕೂ ಅಧಿಕ ಔಷಧಿ ಅಂಗಡಿಗಳು ಅನುಮತಿಸಲ್ಪಟ್ಟ ವಸ್ತುಗಳನ್ನು ಮಾತ್ರ ಮಾರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಸರಕಾರದ ಈ ಚಿಂತನೆಗೆ ಇತ್ತೀಚಿನ ಮ್ಯಾಗಿ ವಿವಾದವೂ ಕಾರಣವಾಗಿದೆ. ಮ್ಯಾಗಿ ನೂಡಲ್ಸ್‌ಗೆ ಸಂಬಂಧಿಸಿದ ವಿವಾದವು ಆ ಕಂಪನಿಯ ಪೂರಕ ಶಿಶು ಆಹಾರ ನ್ಯಾನ್ ಪ್ರೊ ಅನ್ನು ಕೂಡ ಸುರಕ್ಷತಾ ಪರಿಶೀಲನೆಗೊಳಗಾಗುವಂತೆ ಮಾಡಿತ್ತು. ಈ ವಸ್ತುಗಳು ಔಷಧಿಗಳಲ್ಲ. ಔಷಧಿ ಅಂಗಡಿಗಳಲ್ಲಿ ಈ ವಸ್ತುಗಳು ಮಾರಾಟವಾಗುವುದರಿಂದ ಇವು ಸುರಕ್ಷಿತ,ಪರಿಣಾಮಕಾರಿ ಮತ್ತು ಉತ್ತಮ ಎಂಬ ಪ್ರಭಾವಕ್ಕೊಳಗಾಗಿ ಜನರು ಇವುಗಳನ್ನು ಖರೀದಿಸಬಾರದು ಎಂದು ಅಹಿರ್ ಹೇಳಿದರು.
ಆದರೆ ಗ್ರಾಹಕ ಹಕ್ಕು ಕಾರ್ಯಕರ್ತರು ಮತ್ತು ಔಷಧಿ ಮಾರಾಟಗಾರರ ಸಂಘಟನೆಗಳು ಇದನ್ನು ವಿರೋಧಿಸಿವೆ. ಇದು ಔಷಧಿ ಅಂಗಡಿಗಳಲ್ಲಿ ವ್ಯಾಪಾರಕ್ಕೆ ಹೊಡೆತ ನೀಡುತ್ತದೆ. ಅಲ್ಲದೆ ದೇಶಾದ್ಯಂತ ವೈದ್ಯಕೀಯೇತರ ಉತ್ಪನ್ನಗಳ ಲಭ್ಯತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಅಖಿಲ ಭಾರತ ಕೆಮಿಸ್ಟ್ಸ್ ಮತ್ತು ಡ್ರಗಿಸ್ಟ್ಸ್‌ಸಂಘದ ಅಧ್ಯಕ್ಷ ಜೆ.ಎಸ್.ಶಿಂಧೆ ಹೇಳಿದರು.
ಪ್ರಸ್ತುತ ಔಷಧಿ ಅಂಗಡಿಗಳಲ್ಲಿ ಮಾರಾಟ ಮಾಡಬಹುದಾದ ವಸ್ತುಗಳ ಪಟ್ಟಿಯನ್ನು ನಿಯಂತ್ರಿಸುವ ಯಾವುದೇ ನಿಯಮಾವಳಿ ಔಷಧಿಗಳು ಮತ್ತು ಪ್ರಸಾಧನಗಳ ಕಾಯ್ದೆ,1940ರಡಿ ಇಲ್ಲ.

Write A Comment