ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಉಪ ನಾಯಕ ಫದೀಲ್ ಅಹ್ಮದ್ ಅಲ್-ಹಯಾಲಿಯನ್ನು ಮಿಲಿಟರಿ ದಾಳಿಯಲ್ಲಿ ಉತ್ತರ ಇರಾಖ್ ನಲ್ಲಿ ಕೊಲ್ಲಲಾಗಿದೆ ಎಂದು ಶ್ವೇತಭವನ ತಿಳಿಸಿದೆ.
ಹಜ್ ಮುತಜ್ಜ್ ಎಂದು ಕರೆಯಲ್ಪಡುವ ಹಯಾಲಿಯನ್ನು ಸಂಘಟನೆಯ ಎರಡನೇ ದರ್ಜೆಯ ನಾಯಕ ಎಂದು ಗುರುತಿಸಲ್ಪಟ್ಟಿದ್ದ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.
ಹಯಾಲಿಯು ಕಾರಿನಲ್ಲಿ ಮೊಸುಲ್ ಗೆ ಪ್ರಯಾಣಿಸುತ್ತಿದ್ದ ವೇಳೆ ವಾಯುದಾಳಿಯಲ್ಲಿ ಸಾವನ್ನಪ್ಪಿದ್ದು, ಆತನ ಸಾವಿನಿಂದ ಐಎಸ್ ಗುಂಪಿಗೆ ಭಯೋತ್ಪಾದಕ ಕೃತ್ಯ ನಡೆಸಲು ಹಿನ್ನಡೆಯುಂಟಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಇರಾಕ್ ಮತ್ತು ಸಿರಿಯಾದಲ್ಲಿ ಇತ್ತೀಚಿನ ತಿಂಗಳಲ್ಲಿ ಅನೇಕ ಐಎಸ್ ಉಗ್ರರನ್ನು ಅಮೆರಿಕ ನೇತೃತ್ವದ ದಾಳಿಯಲ್ಲಿ ಕೊಲ್ಲಲಾಗಿತ್ತು.