ಮೆಲ್ಬರ್ನ್: ಗುರು ಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರಃ ಎಂದು ಶಾಲೆಗಳಲ್ಲಿ ಮಕ್ಕಳು ಇನ್ನು ಶಿಕ್ಷಕರಿಗೆ ಹೇಳುವ ಬದಲು ರೋಬೋಟ್ ಗಳಿಗೆ ಹೇಳಬೇಕಾಗುತ್ತದೆ.
ಹೌದು ಆಸ್ಟ್ರೇಲಿಯಾದಲ್ಲಿ ರೋಬೋಟ್ ಗಳಿಂದ ಮಕ್ಕಳಿಗೆ ಕಲಿಸಲು ಯೋಚಿಸಿದ್ದು, ಇನ್ನುಮುಂದೆ ಶಿಕ್ಷಕರು ಕಾಣಸಿಗುವುದು ಕಷ್ಟವಾಗಬಹುದು. ಮಾತ್ರವಲ್ಲ, ತರಗತಿಗಳಲ್ಲಿ ಮಕ್ಕಳ ಜೊತೆಗೆ ರೋಬೋಟ್ ಗಳೂ ಕುಳಿತು ಪಾಠ ಕೇಳಲಿವೆ.
ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಕಲಿಸಲು ಅಗತ್ಯವಿರುವ ರೋಬೋಟ್ ಗಳನ್ನು ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿ ಆವಿಷ್ಕರಿಸಿದ್ದು, ಅದನ್ನು ಹೇಗೆ ಬಳಸಿಕೊಳ್ಳಬೇಕೆಂಬ ಚರ್ಚೆ ನಡೆದಿದೆ. ಸ್ವಿನ್ ಬರ್ನ್ ತಾಂತ್ರಿಕ ವಿಶ್ವವಿದ್ಯಾಲಯ, ಪ್ರಮುಖ ರೊಬೊಟಿಕ್ ಕಂಪನಿಗಳು ನಡೆಸಿದ 3 ವರ್ಷದ ಸಂಶೋಧನೆ ಫಲವಾಗಿ ಇವನ್ನು ಅಭಿವೃದ್ದಿಪಡಿಸಲಾಗಿದೆ.
ರೋಬೋಟ್ ಗಳೂ ಸಮಾಜದ ಭಾಗವಾಗಿವೆ. ಭವಿಷ್ಯದಲ್ಲಿ ಕೌಶಲ್ಯ, ನೈಪುಣ್ಯತೆ ಹೊಂದಿರುವ ವಿದ್ಯಾರ್ಥಿಗಳನ್ನು ರೂಪಿಸುವುದು ಆಸ್ಟ್ರೇಲಿಯನ್ ಶಾಲೆಗಳ ಜವಾಬ್ದಾರಿ ಎಂದು ಸಂಶೋಧಕ ಸ್ಟಿನ್ಬರ್ನ್ ಥಾ ತೆರೆಸಾ ಕೀನ್ ಹೇಳಿದ್ದಾರೆ. ಮೂರು ವರ್ಷದ ಸಂಶೋಧನೆಯಲ್ಲಿ ರೋಬೋಟ್ ಗಳನ್ನು ಶಾಲೆಯ ಯಾವುದೇ ವಿಷಯದಲ್ಲಿ ಕಾರ್ಯಗತಗೊಳಿಸಲು ಬೇಕಾದ ರೀತಿಯಲ್ಲಿ ಅವುಗಳನ್ನು ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳ ಬುದ್ದಿಮಟ್ಟ ಸುಧಾರಣೆಗೆ ನೆರವಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಆಸ್ಟ್ರೇಲಿಯಾದ ಎರಡು ಶಾಲೆಗಳಲ್ಲಿ ಈ ಯೋಜನೆ ಶೀಘ್ರದಲ್ಲೇ ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ಬರಲಿದೆ.