ಸಾಮಾನ್ಯವಾಗಿ ಕಹಿಯಾಗಿರುವ ಕಾರಣಕ್ಕೆ ಹಾಗಲಕಾಯಿಯನ್ನು ತರಕಾರಿಯಂತೆ ಬಳಸಲು ಗೃಹಿಣಿಯರು ಹಿಂಜರಿಯುತ್ತಾರೆ.
ಆದರೇ ಅದರಕ್ಕೆ ಕಹಿಯಾಗಿದ್ದರೂ ಉದರಕ್ಕೆ ಸಿಹಿಯಾಗಿರುವ ಹಾಗಲಕಾಯಿ ನಿಯಮಿತ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದಲ್ಲದೇ ಮಧುಮೇಹ ನಿಯಂತ್ರಣಕ್ಕೂ ಇದು ಸಹಕಾರಿ. ರಕ್ತಶುದ್ಧಿಯಾಗಲು ಹಾಗಲಕಾಯಿ ಸೇವನೆ ಉತ್ತಮ.
ಹೀಗೆ ಬಹುಪಯೋಗಿಯಾಗಿರುವ ಹಾಗಲಕಾಯಿಯನ್ನು ಊಟದ ರುಚಿ ಹೆಚ್ಚಿಸುವ ಸಂಡಿಗೆಯಾಗಿಯೂ ಬಳಸಬಹುದು.
ಬೇಕಾಗುವ ವಸ್ತುಗಳು: ಕಾಲು ಕಿಲೋ(250 ಗ್ರಾಂ) ಹಾಗಲಕಾಯಿ, ಅರ್ಧ ಲೀ ಗಟ್ಟಿ ಮೊಸರು, ಉಪ್ಪು, ಕರಿಯಲು ಎಣ್ಣೆ
ಮಾಡುವ ವಿಧಾನ: ಹಾಗಲಕಾಯಿಯನ್ನು ಸ್ವಚ್ಛವಾಗಿ ತೊಳೆದು ನೀರಿಲ್ಲದಂತೆ ಒರೆಸಿಕೊಳ್ಳಿ. ಬಳಿಕ ಹಾಗಲಕಾಯಿಯನ್ನು ಬಿಲ್ಲೆಯಾಕಾರದಲ್ಲಿ ಕತ್ತರಿಸಿ ಉಪ್ಪು ಬೆರೆಸಿದ ಮೊಸರಿನಲ್ಲಿ ನೆನೆಸಿಡಿ. ಮೂರು ದಿನಗಳ ಕಾಲ ಗಾಳಿಯಾಡದಂತೆ ನೆನೆಸಿಟ್ಟ ಬಳಿಕ, ನಾಲ್ಕನೇ ದಿನ ಈ ಹೋಳುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ.
ಚೆನ್ನಾಗಿ ಒಣಗಿದ ಹಾಗಲಕಾಯಿ ಸಂಡಿಗೆಯನ್ನು ಗಾಳಿಯಾಡದಂತೆ ಡಬ್ಬದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ಇದನ್ನು ಎಣ್ಣೆಯಲ್ಲಿ ಕರಿದರೆ ಸಂಡಿಗೆ ರೆಡಿ. ಮೊಸರನ್ನ, ರಸಂ ಅನ್ನದ ಜೊತೆಯಲು ಸವಿಯಲು ರುಚಿಯಾಗಿರುತ್ತದೆ. ಕಹಿ ನಿಮ್ಮನ್ನು ಬಾಧಿಸುವುದಿಲ್ಲ.