ಸಾಮಾನ್ಯವಾಗಿ ಬಹುತೇಕರನ್ನು ಕಾಡುವುದು ದೇಹದ ತೂಕ ಹಾಗೂ ಬೊಜ್ಜಿನ ಸಮಸ್ಯೆ. ಇದರಿಂದಾಗಿ ಆರೋಗ್ಯದಲ್ಲೂ ಏರುಪೇರಾಗುತ್ತದಲ್ಲದೇ ದೇಹವೂ ಹಲವು ಕಾಯಿಲೆಗಳಿಗೆ ಬಹು ಬೇಗನೆ ತುತ್ತಾಗುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಬಯಸುವವರಿಗೆ ಹೊಸ ವಿಧಾನವೊಂದಿದ್ದು, ಅದಕ್ಕಾಗಿ ಇದನ್ನು ಓದಿ.
ಇದಕ್ಕೆ ರಕ್ಕಿಂಗ್ (Rucking) ಎಂದು ಹೆಸರಿಸಲಾಗಿದ್ದು, ಭಾರವಾದ ಬ್ಯಾಗುಗಳನ್ನು ಬೆನ್ನಿಗೆ ಕಟ್ಟಿಕೊಂಡು ಗುಂಪಿನೊಂದಿಗೆ ದಿನ ನಿತ್ಯ ಐದಾರು ಕಿಲೋ ಮೀಟರ್ ವಾಕಿಂಗ್ ಮಾಡಿದರೆ, ದೇಹದಲ್ಲಿನ ಕೊಬ್ಬಿನಾಂಶ ಕರಗುತ್ತದಲ್ಲದೇ ಬೊಜ್ಜಿನ ಸಮಸ್ಯೆ ನಿವಾರಣೆಯಾಗಿ ದೇಹ ಲವಲವಿಕೆಯಿಂದ ಕೂಡಿರುತ್ತದೆ ಎನ್ನಲಾಗಿದೆ. ಅಲ್ಲದೇ ಇದಕ್ಕೆ ವಿಶೇಷ ತರಬೇತಿಯೇನು ಬೇಕಾಗಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಇದು ಈಗಾಗಲೇ ಜನಪ್ರಿಯತೆ ಪಡೆದಿದೆ.
ಜೊತೆಯಲ್ಲಿ ಸಮಾನಮನಸ್ಕ ಗೆಳೆಯರೂ ಇದ್ದರೆ ದಾರಿ ಸವೆದದ್ದೇ ಗೊತ್ತಾಗುವುದಿಲ್ಲ. ಪ್ರತಿ ದಿನ ಅರ್ಧ ಗಂಟೆಗಳ ಕಾಲ ಈ ರೀತಿ ಬೆನ್ನಿಗೆ ಭಾರವಾದ ಬ್ಯಾಗುಗಳನ್ನು ಕಟ್ಟಿಕೊಂಡು ನಡೆದಾಡಿದರೆ ದೇಹವೂ ಸದೃಢವಾಗುತ್ತದೆ. ನಮ್ಮ ದೇಹ ಎಷ್ಟು ಭಾರದ ಬ್ಯಾಗನ್ನು ತಡೆದುಕೊಳ್ಳುತ್ತದೋ ಅಷ್ಟು ಭಾರದ ವಸ್ತುಗಳನ್ನು ಬ್ಯಾಗಿನಲ್ಲಿ ತುಂಬಿಸಿಟ್ಟರೆ ಸಾಕು. ಬಳಿಕ ಬ್ಯಾಗಿನ ಭಾರವನ್ನು ಹೆಚ್ಚು ಮಾಡುತ್ತಾ ಹೋಗಬಹುದು. ಭಾರದ ಬ್ಯಾಗನ್ನು ಬೆನ್ನಿಗೆ ಕಟ್ಟಿಕೊಂಡ ವೇಳೆ ಬಹುತೇಕರಿಗೆ ಬೆನ್ನು ಅಥವಾ ಕತ್ತು ನೋವು ಕಂಡು ಬರುತ್ತದೆ. ಅಂತವರು ಎಚ್ಚರಿಕೆ ವಹಿಸುವುದು ಸೂಕ್ತ.