ಅಂತರಾಷ್ಟ್ರೀಯ

’ಕೆನ್’ ಗೊಂಬೆಯ ಮಾನವ ಅವೃತ್ತಿಯಾಗಬೇಕೆಂದು ಬಯಸಿದ್ದ ಸೆಲ್ಸೋ ಇನ್ನಿಲ್ಲ

Pinterest LinkedIn Tumblr

selso

ವಾಷಿಂಗ್ಟನ್: ಮಾನವ ’ಕೆನ್’ ಗೊಂಬೆಯಾಗಬೇಕೆಂದು ಬಯಸಿ 50,000 ಅಮೆರಿಕನ್ ಡಾಲರ್ ವೆಚ್ಚದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳುವ ಮೂಲಕ ಖ್ಯಾತನಾಗಿದ್ದ ಬ್ರೆಜಿಲ್​ನ 20ರ ಹರೆಯದ ಯುವಕ ಸೆಲ್ಸೊ ಸಾಂಟೆಬೇನ್ಸ್ ಐದು ತಿಂಗಳ ಕಾಲದ ಕ್ಯಾನ್ಸರ್ ಜೊತೆಗಿನ ಹೋರಾಟದ ಬಳಿಕ ಗುರುವಾರ ನಿಧನರಾಗಿದ್ದಾರೆ.

’ಬಾರ್ಬಿ’ಯ ಗೆಳೆಯ ’ಕೆನ್’ ಗೊಂಬೆಯ ಮಾನವ ಅವೃತ್ತಿ ತಾನಾಗಬೇಕು ಎಂದು ಬಯಸಿದ್ದ ಸೆಲ್ಸೋಗೆ ಕಳೆದ ವರ್ಷ ’ಲ್ಯುಕೇಮಿಯ’ ಇದ್ದುದು ಪತ್ತೆಯಾಗಿತ್ತು.

ಮಿನಾಯಿಸ್ ಗೆರಾಯಿಸ್ ರಾಜ್ಯದ ಉಬೇರ್​ಲಾಂಡಿಯಾದ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ನ್ಯೂಮೋನಿಯಾ ಜ್ವರಕ್ಕೆ ಸೆಲ್ಸೊ ತುತ್ತಾಗಿದ್ದಾರೆ. ಮೇ 26ರಂದು ಸೆಲ್ಸೊ ಅವರನ್ನು ಕ್ಯಾನ್ಸರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

16ನೇ ವಯಸ್ಸಿನಲ್ಲಿ ಮಾಡೆಲಿಂಗ್ ಸ್ಪರ್ಧೆಯಲ್ಲಿ ಗೆದ್ದ ಬಳಿಕ ಮಾನವ ’ಕೆನ್’ ಗೊಂಬೆ ಆಗಲು ತನ್ನ ಪ್ರಯತ್ನಗಳನ್ನು ಸೆಲ್ಸೊ ಆರಂಭಿಸಿದ್ದರು. ಚಿಕ್ಕವನಿದ್ದಾಗ ಸೆಲ್ಸೊ ಬಳಿ ಮನೆಯವರೆಲ್ಲ ನೀನು ’ಗೊಂಬೆ’ಯಂತೆ ಇದ್ದೀಯಾ ಎಂದು ಹೇಳುತ್ತಿದ್ದರು.

ಸಾವೊ ಪಾಲೋ ಪಟ್ಟಣದಲ್ಲಿ ನಡೆದ ಟಾಕ್ ಶೋ ಒಂದರಲ್ಲಿ ಸೆಲ್ಸೊ ಎಲ್ಲರ ಮನಗೆದ್ದು ಖ್ಯಾತಿಗೆ ಬಂದರು. ಲಾಸ್ ಏಂಜೆಲಿಸ್​ನಲ್ಲಿ ಸ್ವಂತ ‘ಸೆಲ್ಸೊ ಡೋಲ್ಸ್’ನ್ನೂ (ಸೆಲ್ಸೊ ಗೊಂಬೆಗಳು) ಅವರು ಆರಂಭಿಸಿದ್ದರು. ಇದಾದ ಸ್ವಲ್ಪ ಸಮಯದ ಬಳಿಕ ಅವರು ಅಸ್ವಸ್ಥರಾದರು ಎಂದು ‘ದಿ ಇನ್ಕ್ವಿಸಿಟ್ರ್’ ವರದಿ ಮಾಡಿದೆ.

‘ಮಾನವ ಗೊಂಬೆ’ಯಾಗುವ ತನ್ನ ಯತ್ನದಲ್ಲಿದ್ದ ಸೆಲ್ಸೊ ಸಾವನ್ನಪ್ಪುವ ಮುನ್ನ ತನ್ನ ದವಡೆ, ಗಲ್ಲ, ಮೂಗು ಮತ್ತು ಎದೆಗೆ ‘ಸಿಲಿಕೋನ್ ಕಸಿ’ ಸೇರಿದಂತೆ ನಾಲ್ಕು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.

ತನ್ನ ಕಾಲುಗಳಿಗೆ ನಾಲ್ಕು ವರ್ಷಗಳ ಹಿಂದೆ ಸೇರಿಸಲಾಗಿದ್ದ ‘ಹೈಡ್ರೊಜೆಲ್ ಫಿಲ್ಲರ್ಸ್’ನಿಂದಾಗಿ ಉಂಟಾಗಿದ್ದ ಸೋಂಕಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ವರ್ಷದ ಹಿಂದೆ ಆಸ್ಪತ್ರೆಗೆ ಹೋಗಿದ್ದಾಗ ಸೆಲ್ಸೊಗೆ ತನಗೆ ಕ್ಯಾನ್ಸರ್ ಇದ್ದುದು ಗೊತ್ತಾಗಿತ್ತು.

’ಕನಸುಗಳನ್ನು ನನಸಾಗಿಸಿಕೊಳ್ಳಲು ಆರಂಭಿಸುವ ಹೊತ್ತಿನಲ್ಲಿ ಆತನಿಗೆ ತನಗೆ ರೋಗ ಇರುವುದು ಗೊತ್ತಾಯಿತು. ಆತನ ಕನಸುಗಳ ಸಾಕಾರಕ್ಕೆ ಅದು ಅಡ್ಡಿಯಾಯಿತು. ಆತನಿಗೆ ಯೋಜನೆಗಳಿದ್ದವು. ಆದರೆ ವಿಧಿಯ ಯೋಚನೆ ಬೇರೆಯಾಗಿತ್ತು’ ಎಂದು ಸೆಲ್ಸೊ ತಂದೆ ಸೆಲಿಯೊ ಬೋರ್ಜ್ ಹೇಳಿದರು.

Write A Comment