ಅಂತರಾಷ್ಟ್ರೀಯ

ಕಳವಾಗಿದ್ದ ಮಾರ್ಕೆಸ್ ಕಾದಂಬರಿಯ ಮೊದಲ ಮುದ್ರಣದ ಪ್ರತಿ ಪತ್ತೆ

Pinterest LinkedIn Tumblr

100YearsofS

ಬಗೋಟ: ಕಳವಾಗಿದ್ದ ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಕಾದಂಬರಿಕಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಸ್ ಅವರ ವಿಶ್ವ ವಿಖ್ಯಾತ ‘ಒನ್ ಹಂಡ್ರೆಡ್ ಯಿಯರ್ಸ್ ಆಫ್ ಸಾಲಿಟ್ಯೂಡ್’ (ಒಂದು ನೂರು ವರ್ಷದ ಏಕಾಂತ) ಕೃತಿಯ ಮೊದಲ ಮುದ್ರಣದ ಪ್ರತಿಯನ್ನು ಕೊಲಂಬಿಯಾ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮೇ ೨ ರಂದು ಬಗೋಟಾದ ಅಂತರಾಷ್ಟ್ರೀಯ ಪುಸ್ತಕ ಮೇಳದಿಂದ ಈ ಪುಸ್ತಕ ಕಾಣೆಯಾಗಿತ್ತು ನಂತರ ಇದನ್ನು ರಸ್ತೆ ಬದಿಯ ಪುಸ್ತಕದಂಗಡಿಯ ಒಂದು ಡಬ್ಬದಲ್ಲಿ ಕಂಡು ಬಂದಿದೆ. ಈ  ಪುಸ್ತಕ ಮೂಲ ಮಾಲೀಕ ಶುಕ್ರವಾರ ಪುಸ್ತಕವನ್ನು ರಾಷ್ಟ್ರೀಯ ಗ್ರಂಥಾಲಯಕ್ಕೆ ದಾನ ಮಾಡಿದ್ದಾರೆ ಎಂದು ಬಗೋಟಾ ಪೊಲೀಸರು ತಿಳಿಸಿದ್ದಾರೆ.

ಬ್ಯೂನೋ ಏರಿಸ್ ನಲ್ಲಿ ೧೯೬೭ ರಲ್ಲಿ ಈ ಪುಸ್ತಕ ಮೊದಲು ಮುದ್ರಣಗೊಂಡಿತ್ತು. ಆಗ ಮಾರ್ಕೆಸ್ ಮೆಕ್ಸಿಕೋದಲ್ಲಿ ವಾಸಿಸುತ್ತಿದ್ದರು.

ಪೊಲೀಸರಿಂದ ಪುಸ್ತಕವನ್ನು ಪಡೆದ ಅದರ ಮಾಲೀಕ ಅಲ್ವರೋ ಕ್ಯಾಸ್ಟಿಲ್ಲೊ ಪುಸ್ತಕವನ್ನು ರಾಷ್ಟ್ರೀಯ ಗ್ರಂಥಾಲಯಕ್ಕೆ ನೀಡುವ ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ.

ಪುಸ್ತಕದ ಮೇಲೆ ಮಾರ್ಕೆಸ್ ಅವರು “ಅಲ್ವರೋ ಕ್ಯಾಸ್ಟಿಲ್ಲೊ ಅವರಿಗೆ, ಹಳೆಯ ಪುಸ್ತಕದ ವ್ಯಾಪಾರಿ, ನೆನ್ನೆ ಮತ್ತು ಎಂದೆಂದಿಗೂ ನಿನ್ನ ಗೆಳೆಯ ಗ್ಯಾಬೋ” ಎಂದು ಸಹಿ ಹಾಕಲಾಗಿದ್ದರೂ ಇದು ರಾಷ್ಟ್ರೀಯ ಆಸ್ತಿ ಎಂದು ಕ್ಯಾಸ್ಟಿಲ್ಲೊ ತಿಳಿಸಿದ್ದಾರೆ.

“ಈ ಪುಸ್ತಕ ನನಗಷ್ಟೇ ಸೇರಿದ್ದಲ್ಲ ದೇಶದ್ದು. ಇದನ್ನು ರಾಷ್ಟ್ರೀಯ ಗ್ರಂಥಾಲಯಕ್ಕೆ ದಾನ ನೀಡಿದ್ದೇನೆ. ಇದು ಕಳವಾದ ನಂತರ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿ ಇದನ್ನು ಹಿಂದಿರುಗಿಸಲು ಜನರು ಕಳ್ಳರಿಗೆ ಮನವಿ ಮಾಡಿದ್ದರು” ಎಂದು ಕ್ಯಾಸ್ಟಿಲ್ಲೊ ತಿಳಿಸಿದ್ದಾರೆ.

ಪುಸ್ತಕ ಹಿಂದಿರುಗಿದಾಕ್ಷಣ ಪ್ರಕರಣ ಮುಚ್ಚಿಹಾಕಲಾಗುವುದಿಲ್ಲ. ಕಳ್ಳನಿಗಾಗಿ ಶೋಧ ಕಾರ್ಯ ಪ್ರಗತಿಯಲ್ಲಿದೆ. ಆರೋಪ ಸಾಬೀತಾದರೆ ೨೦ ವರ್ಷದ ಶಿಕ್ಷೆ ಆಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment