ಪೈಸ್ಲೆ (ಯು.ಕೆ.), ಮೇ 8: ಇಪ್ಪತ್ತರ ಹರೆಯದ ಕಾಲೇಜು ವಿದ್ಯಾರ್ಥಿನಿ ಪ್ರಭಾವಿ ಹಾಗೂ ಹಿರಿಯ ಅನುಭವಿ ನಾಯಕರೊಬ್ಬರನ್ನು ಮಣಿಸಿ ಲೋಕಸಭೆ ಮೆಟ್ಟಿಲೇರಿದ ಅಪರೂಪದ ಪ್ರಸಂಗವೊಂದು ಇದೀಗ ಬ್ರಿಟನ್ ಚುನಾವಣೆಯಲ್ಲಿ ನಡೆದಿದೆ.
ಸ್ವತಂತ್ರ್ಯ ಸ್ಕಾಟಿಷ್ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಮಯರಿ ಬ್ಲ್ಯಾಕ್ ಎಂಬ ಯುವತಿ ಲೇಬರ್ ಕನ್ಸರ್ವೇಟಿವ್ ಪಕ್ಷದ ಚುನಾವಣಾ ಉಸ್ತುವಾರಿ ಹೊತ್ತಿದ್ದ ಡೊಗ್ಲಾಸ್ ಅಲೆಗ್ಸಾಂಡರ್ ಅವರನ್ನು ಪೈಸ್ಲಿ ಲೋಕಸಭಾ ಕ್ಷೇತ್ರದಲ್ಲಿ ಮಣಿಸಿ ಅತ್ಯಂತ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ಕಾಟ್‌ಲ್ಯಾಂಡ್‌ನ 59 ಸ್ಥಾನಗಳ ಪೈಕಿ 58 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಎಸ್‌ಎನ್‌ಪಿ ಪಕ್ಷ ಈ ಗೆಲುವಿನಿಂದ ಭಾರೀ ಉತ್ಸಾಹದಲ್ಲಿದ್ದು, 1667ರಿಂದಾಚೆಗೆ ಬ್ರಿಟನ್ ಲೋಕಸಭೆಗೆ ಪ್ರಥಮ ಬಾರಿಗೆ ಆಯ್ಕೆಯಾದ ಅತಿ ಕಿರಿಯ ವಯಸ್ಸಿನ ಮಯರಿ ಬಗ್ಗೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗಿವೆ.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಮಯರಿ ಈ ಚುನಾವಣೆಯಲ್ಲಿ ಮತದಾರರು ಪ್ರಬುದ್ಧತೆ ತೋರಿದ್ದಾರೆ ಎಂದು ಹೇಳಿಕೊಂಡಿರುವ ಆಕೆ ಸಣ್ಣ ವಯಸ್ಸಿಗೇ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಇದನ್ನು ಅತ್ಯಂತ ಸವಾಲಾಗಿ ಸ್ವೀಕರಿಸಿ ಅತ್ಯುತ್ತಮ ಕೆಲಸ ನಿರ್ವಹಿಸುತ್ತೇನೆ ಎಂದು ತಿಳಿಸಿದ್ದಾರೆ.