ಕಠ್ಮಂಡು: ಭೂಕಂಪ ಪೀಡಿತ ನೇಪಾಳ ದೇಶಕ್ಕೆ ಭಾರತ ಸರ್ಕಾರ ಸುಮಾರು 1 ಲಕ್ಷ ಟೆಂಟ್ ಗಳನ್ನು ರವಾನಿಸಿದೆ.
ಭೂಕಂಪನದಿಂದಾಗಿ ನಿರಾಶ್ರಿತರಾಗಿರುವ ಲಕ್ಷಾಂತರ ನೇಪಾಳಿಗರಿಗೆ ಪರ್ಯಾಯ ಸೂರು ಒದಗಿಸುವಂತೆ ನೇಪಾಳ ಸರ್ಕಾರ ಮಾಡಿದ್ದ ಮನವಿಯ ಮೇರೆಗೆ ಭಾರತ ಸರ್ಕಾರ ಇಂದು
ಸುಮಾರು 1 ಲಕ್ಷ ತಾತ್ಕಾಲಿಕ ಟೆಂಟ್ ಗಳನ್ನು ನೇಪಾಳಕ್ಕೆ ರವಾನಿಸಿದೆ ಎಂದು ತಿಳಿದುಬಂದಿದೆ. ಕೋಲ್ಕತಾದಲ್ಲಿರುವ ನೇಪಾಳದ ವಿದೇಶಾಂಗ ಅಧಿಕಾರಿ ಸುರೇಂದ್ರ ತಾಪಾ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸೋಮವಾರ ಬೆಳಗ್ಗೆ ಈ ಎಲ್ಲ ತಾತ್ಕಾಲಿಕ ಟೆಂಟ್ ಗಳನ್ನು ನೇಪಾಳಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದರು. ಇನ್ನು ಕೋಲ್ಕತಾ ಜಿಲ್ಲೆಯೊಂದರಿಂದಲೇ ಸುಮಾರು 13 ಸಾವಿರ ಟೆಂಟ್ ಗಳನ್ನು ನೇಪಾಳಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾಪಾ ಅವರಿಗೆ ಹಸ್ತಾಂತರಿಸಿದರು.
ಮತ್ತೆ ಮಳೆ ಕಾಟ ಶಂಕೆ
ಇತ್ತ ಭೂಕಂಪನದಿಂದಾಗಿ ಈಗಾಗಲೇ ಸಾಕಷ್ಟು ನರಳುತ್ತಿರುವ ನೇಪಾಳಕ್ಕೆ ಮಳೆರಾಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಮುಂದಿನ 2 ವಾರಗಳ ಕಾಲ ನೇಪಾಳದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಪ್ರಸ್ತುತ ಸೂರಿಲ್ಲದೇ ನಿರಾಶ್ರಿತರಾಗಿರುವ ಲಕ್ಷಾಂತರ ಮಂದಿ ಮಳೆಯಲ್ಲಿ ನನೆದುಕೊಂಡೇ ಕಾಲ ತಳ್ಳಬೇಕಾದ ಸ್ಥಿತಿ ಎದುರಾಗಿದೆ. ಹೀಗಾಗಿ ಇಂತಹ ಸಂಕಷ್ಟದ ಸಮಯದಲ್ಲಿ ನೇಪಾಳಿ ದೇಶಿಗರಿಗೆ ಟೆಂಟ್ ಗಳನ್ನು ದಾನ ಮಾಡುವಂತೆ ಸಾಮಾಜಿಕ ಕಾರ್ಯಕರ್ತರು ವಿಶ್ವ ಸಮುದಾಯದ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಮುಚ್ಚಿದ ತ್ರಿಭುವನ್ ವಿಮಾನ ನಿಲ್ದಾಣ
ಇನ್ನು ವಿವಿಧ ದೇಶಗಳಿಂದ ಪರಿಹಾರ ಸಾಮಗ್ರಿಗಳನ್ನು ಹೊತ್ತು ನೇಪಾಳಕ್ಕೆ ಬರುತ್ತಿರುವ ವಿಮಾನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಎಲ್ಲ ವಿಮಾನಗಳು ಕಠ್ಮಂಡುವಿನಲ್ಲಿರುವ ತ್ರಿಭುವನ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿವೆ. ಸತತ ವಿಮಾನಗಳ ಆಗಮನ ಮತ್ತು ನಿರ್ಗಮನದಿಂದಾಗಿ ಏಕೈಕ ರನ್ ವೇಯನ್ನು ಹೊಂದಿರುವ ತ್ರಿಭುವನ್ ವಿಮಾನ ನಿಲ್ದಾಣವನ್ನು ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ನಿಲ್ದಾಣಕ್ಕಿರುವ ಏಕೈಕ ರನ್ ವೇ ಗೆ ಯಾವುದೇ ಹಾನಿ ನಡೆಯದಂತೆ ತಡೆಯಲು ಈ ಕಠಿಣ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-ಕನ್ನಡ ಪ್ರಭ