ಕಠ್ಮಂಡು, ಮೇ 1-ಕಳೆದ ಶನಿವಾರ ಸಂಭವಿಸಿದ ವಿನಾಶಕಾರಿ ಭೂಕಂಪದ ರುದ್ರನರ್ತನಕ್ಕೆ ಸಿಲುಕಿ ಜರ್ಝರಿತಗೊಂಡಿರುವ ನೇಪಾಳದಲ್ಲಿ ಮರಣಮೃದಂಗದ ಕರ್ಕಶ ಸದ್ದು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ರಾಜಧಾನಿ ಕಠ್ಮಂಡು ಸೇರಿದಂತೆ ಬಹುತೇಕ ನಾಮಾವಶೇಷವಾದಂತಿರುವ ಕೆಲವು ಜಿಲ್ಲೆಗಳಲ್ಲಿ ಭೂಗರ್ಭ ಸೇರಿದವರೆಷ್ಟು ಎಂಬ ನಿಖರ ಮಾಹಿತಿ ನೇಪಾಳ ಸರ್ಕಾರಕ್ಕೆ ಇನ್ನೂ ಸಿಕ್ಕಿಲ್ಲ. ಏ.25ರಂದು ಭೂಕಂಪ ಸಂಭವಿಸಿದಂದಿನಿಂದ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಯುತ್ತಿದ್ದರೂ ಪತ್ತೆಯಾಗಿರುವುದು ಮಾತ್ರ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ
6,500 ಶವಗಳು ಕವಿದು ಬಿದ್ದಿರುವ ಆ ಅವಶೇಷಗಳಡಿ ಇನ್ನೂ ಅದೆಷ್ಟು ಶವಗಳು ಕೊಳೆತು ನಾರುತ್ತಿವೆಯೋ? ಪಶ್ವಾತ್ ಕಂಪನಗಳು, ಮಳೆ, ಹಿಮಪಾತಗಳು ರಕ್ಷಣಾ ಕಾರ್ಯಕ್ಕೆ ಉಂಟು ಮಾಡಿದ ಅಡಚಣೆಗಳ ಹೊರತಾಗಿಯೂ ಭಾರತವೂ ಸೇರಿದಂತೆ ವಿವಿಧ ದೇಶಗಳ ಕಾರ್ಯಪಡೆಗಳು ಚುರುಕಿನಿಂದಲೇ ಪರಿಹಾರ ಕಾರ್ಯದಲ್ಲಿ ತೊಡಗಿವೆ. ಗಾಯಾಳುಗಳ ಸಂಖ್ಯೆಯೇ 20 ಸಾವಿರ ದಾಟಿದೆ.
ಏರುತ್ತಲೇ ಇದೆ ಸಾವಿನ ಸಂಖ್ಯೆ:
ಸಾವಿನ ಸಂಖ್ಯೆ 20 ಸಾವಿರವೋ, 30 ಸಾವಿರವೋ ಬಲ್ಲವರಿಲ್ಲ. ಲೆಕ್ಕವಂತೂ ಸಿಕ್ಕುತ್ತಿಲ್ಲ. ಮನೆಗಳ ಅವಶೇಷಗಳಡಿ ಸಿಕ್ಕಿ ಸಾವನ್ನಪ್ಪಿರುವವರ ಶವಗಳು ಬೀರುತ್ತಿರುವ ದುರ್ಗಂಧದಿಂದಾಗಿ ಪರಿಹಾರ ಕಾರ್ಯಕರ್ತರು ಅಲ್ಲಿ ಕೆಲಸ ಮಾಡುವುದೇ ದುಸ್ತರವಾಗಿದೆ.
ಸಾಂಕ್ರಾಮಿಕ ರೋಗಗಳು ಈಗಾಗಲೇ ತಾಂಡವವಾಡುತ್ತಿದ್ದು, ಬದುಕುಳಿದವರ ಪಾಲಿಗೆ ಮರಣಶಾಸನ ಬರೆಯುವಂತಿವೆ. 7.9ರಷ್ಟು ತೀವ್ರತೆಯ ಭೂಕಂಪದ ಸೆಳೆತದಲ್ಲಿ ಧ್ವಂಸವಾಗಿರುವ ಮನೆಗಳ ಮರು ನಿರ್ಮಾಣಕ್ಕೇ ಕನಿಷ್ಠ ಎರಡು ಶತಕೋಟಿ ಡಾಲರ್ ಅಗತ್ಯವಿದೆ ಎನ್ನುತ್ತಾರೆ ನೇಪಾಳ ಹಣಕಾಸು ಸಚಿವ ರಾಮಶರಣ್ ಮಹತ್ ಅವರು. ಈ ಹಿನ್ನೆಲೆಯಲ್ಲಿಯೇ ನೇಪಾಳ ಸರ್ಕಾರ ಈಗಾಗಲೇ ನೆರವಿಗಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ.
80 ಲಕ್ಷ ನಿರಾಶ್ರಿತರು: ವಿಶ್ವಸಂಸ್ಥೆ:
ನೇಪಾಳ ಭೂಕಂಪದಲ್ಲಿ ಕನಿಷ್ಠ 80 ಲಕ್ಷ ಜನ ನಿರಾಶ್ರಿತರಾಗಿದ್ದಾರೆ. ತುರ್ತಾಗಿ ಕನಿಷ್ಠ 20ಲಕ್ಷ ಜನರಿಗೆ ಟೆಂಟ್‌ಗಳ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ತಕ್ಷಣದ ಪರಿಹಾರವಾಗಿ ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ತಲಾ 1ಸಾವಿರ ಡಾಲರ್ ಹಾಗೂ ಅಂತ್ಯ ಸಂಸ್ಕಾರಕ್ಕಾಗಿ 400 ಡಾಲರ್ ನೀಡಲಾಗುತ್ತಿದೆ ಎಂದು ನೇಪಾಳ ವಾರ್ತಾಸಚಿವ ವಿನೇಂದ್ರರಿಜಾಲ್ ಹೇಳಿದ್ದಾರೆ. ಸಾವಿನ ಸಂಖ್ಯೆ 10 ಸಾವಿರ ದಾಟಬಹುದು ಎಂದು ಸ್ವತಃ ಪ್ರಧಾನಿ ಸುಶೇಲ್ ಕೊಯಿರಾಲಾ ಎರಡು ದಿನಗಳ ಮೊದಲೇ ಹೇಳಿದ್ದರು. 1934ರಲ್ಲಿ ಸಂಭವಿಸಿದ್ದ ಇಂಥದ್ದೇ ಪ್ರಬಲ ಭೂಕಂಪದಲ್ಲಿ ಆಗ 8,500 ಮಂದಿ ಸಾವನ್ನಪ್ಪಿದ್ದರು.
-ಕೃಪೆ: ಈ ಸಂಜೆ