ಆಸ್ಪತ್ರೆಗೆ ಸೇರಿದ ಮಂದಿ ಪ್ರತಿನಿತ್ಯ ಒಂದಿಲ್ಲೊಂದು ಕಾರಣದಿಂದ ಸಮರ್ಪಕ ಸಮಯದಲ್ಲಿ ರಕ್ತ ಲಭಿಸದೇ ಮರಣವನ್ನಪ್ಪುವುದೇ ಹೆಚ್ಚು. ಅದರಲ್ಲಿಯೂ ಅದೇ ಗುಂಪಿನ ರಕ್ತ ಎಲ್ಲಾ ಸಮಯದಲ್ಲಿಯೂ ಲಭಿಸದಿರುವುದು ಇಂತಹ ಅವಘಡಗಳಿಗೆ ಕಾರಣ. ಆದರೆ ಇನ್ಮುಂದೆ ಅದಕ್ಕಾಗಿ ಚಿಂತಿಸುವ ಅಗತ್ಯವೇ ಇಲ್ಲ ಏಕೆಂದರೆ ಯಾರ ರಕ್ತವನ್ನು ಯಾರಿಗೆ ಬೇಕಾದರೂ ನೀಡಬಹುದು.
ಹೌದು. ಆಷ್ಟು ದಿನ ಒ ಮೈನಸ್ (O-) ರಕ್ತದ ಗುಂಪಿನವರು ಮಾತ್ರ ಯಾರಿಗೆ ಬೇಕಾದರೂ ರಕ್ತ ನೀಡಬಹುದಿತ್ತು. ಅಲ್ಲದೇ ಎಬಿ ಪ್ಲಸ್ (AB+) ರಕ್ತ ಹೊಂದಿರುವವರು ಯಾರ ರಕ್ತವನ್ನಾದರೂ ಪಡೆಬಹುದು. ಆದರೆ, ಇದೀಗ ಕೆನಡಾದ ವಿಜ್ಞಾನಿಗಳ ತಂಡವೊಂದು ಹೊಸ ಆವಿಷ್ಕಾರ ಮಾಡಿದ್ದು ಯಾರ ರಕ್ತವನ್ನು ಯಾರಿಗೆ ಬೇಕಾದರೂ ನೀಡಲು ಸಾಧ್ಯವಾಗುವಂತೆ ಕಿಣ್ವವೊಂದನ್ನು ಕಂಡುಹಿಡಿದು ಅಚ್ಚರಿಗೆ ಕಾರಣರಾಗಿದ್ದಾರೆ.
ವಿಜ್ಞಾನಿಗಳು ಕಂಡುಹಿಡಿದಿರುವ ಎನ್’ಝೈಮ್ (ಕಿಣ್ವ) ಒಂದು ರೀತಿಯಲ್ಲಿ ರಕ್ತದಲ್ಲಿ ನಿರ್ದಿಷ್ಟ ಬದಲಾವಣೆ ತರಲಿದ್ದು ಎ ಮತ್ತು ಬಿ ಗುಂಪಿನ ರಕ್ತಗಳಲ್ಲಿರುವ ನಿರ್ದಿಷ್ಟ ಸಕ್ಕರೆ ಅಂಶವನ್ನು ಕಿತ್ತುಹಾಕುವ ಮೂಲಕ ಒ ನೆಗಟಿವ್ ಗುಂಪಿನಂತೆ ರಕ್ತವನ್ನು ಪರಿವರ್ತಿಸುತ್ತದೆ. ಅಲ್ಲದೇ ಇದರಿಂದ ಯಾವುದೇ ರಕ್ತ ಗುಂಪಿಗೆ ಒ ನೆಗಟಿವ್ ರಕ್ತದ ಗುಣ ಬರುವಂತೆ ಮಾಡಲಾಗುತ್ತದೆ. ಈ ಮೂಲಕ, ಆ ರಕ್ತವನ್ನು ಯಾರಿಗೆ ಬೇಕಾದರೂ ಕೊಡಬಹುದಾಗಿದ್ದು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ತಂಡವೊಂದು ನಡೆಸಿದ ಈ ಸಂಶೋಧನೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರೂ ಪಾಲ್ಗೊಂಡಿದ್ದಾರೆ.
-ಕೃಪೆ: ಕನ್ನಡ ದುನಿಯಾ
