ಅಂತರಾಷ್ಟ್ರೀಯ

ಕೀನ್ಯಾದಲ್ಲಿ ಉಗ್ರರ ಅಟ್ಟಹಾಸ : 147 ಮಕ್ಕಳ ಬರ್ಬರ ಹತ್ಯೆ

Pinterest LinkedIn Tumblr

Kenya-Terror-Attack

ಕೀನ್ಯಾ, ಏ.3-ಪಾಕಿಸ್ತಾನದ ಪೇಶಾವರದ ಶಾಲೆಯಲ್ಲಿ ತಾಲಿಬಾನ್ ಉಗ್ರರು 150 ಮಕ್ಕಳನ್ನು ದಾರುಣವಾಗಿ ಹತ್ಯೆ ಮಾಡಿದ ಘಟನೆ ಹಸಿರಾಗಿರುವಾಗಲೇ ಕೀನ್ಯಾದ ವಿಶ್ವವಿದ್ಯಾನಿಲಯವೊಂದರ ಮೇಲೆ ದಾಳಿ ನಡೆಸಿದ ಅಲ್ ಶಬಾಬ್ ಉಗ್ರರು 147 ಮಕ್ಕಳನ್ನು ಕೊಂದು ಹಾಕಿರುವ ಹೃದಯ ವಿದ್ರಾವಕ ಘಟನೆ ನಿನ್ನೆ ರಾತ್ರಿ ನಡೆದಿದೆ. ವಿವಿಯಲ್ಲಿದ್ದ ಒಟ್ಟು 850 ಮಕ್ಕಳಲ್ಲಿ 518ಮಂದಿ ಮಕ್ಕಳು ಹಾಜರಿದ್ದರು. ಈ ಮಕ್ಕಳಲ್ಲಿ 147 ಜನರನ್ನು ಶಬಾಬ್ ಉಗ್ರರು ಕೊಂದುಹಾಕಿದ್ದು, ಅತ್ಯಂತ ಧೈರ್ಯ ದಿಂದ ಪೊಲೀಸರು ಮತ್ತು ಮಿಲಿಟರಿ ಪಡೆ ಕಾರ್ಯಾಚರಣೆ ನಡೆಸಿ ನಾಲ್ವರು ಉಗ್ರರನ್ನು ಹತ್ಯೆ ಮಾಡಿ ಇತರ ಮಕ್ಕಳನ್ನು ರಕ್ಷಿಸಿದ್ದಾರೆ.

ಪೂರ್ವ ಕೀನ್ಯಾದಲ್ಲಿರುವ ಈ ಕ್ರೈಸ್ತ ವಿಶ್ವವಿದ್ಯಾಲಯದ  ಮೇಲೆ ಕ್ರೈಸ್ತ ವಿರೋಧಿ ಅಲ್-ಶಬಾಬ್ ಉಗ್ರರು ಈ ಹೇಯ ಕೃತ್ಯ ನಡೆಸಿ ಮಕ್ಕಳನ್ನು ಹತ್ಯೆ ಮಾಡಿದ್ದಾರೆ. ಇದೊಂದು ಅತ್ಯಂತ ಮಾನವ ವಿರೋಧಿ ಹೀನ ಕೃತ್ಯ ಎಂದು ಕೀನ್ಯಾ ಅಧ್ಯಕ್ಷ ಉಹುರು ಕೆನ್ಯಾಟ್ಟ ಹಾಗೂ ಗೃಹ ಸಚಿವ ಜೋಸೆಫ್ ಎನ್‌ಕಾಯ್ಸೆರಿ ಖಂಡಿಸಿದ್ದಾರೆ. ಸದ್ಯ ಉಗ್ರರ ದಾಳಿಗೊಳಗಾಗಿರುವ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಎಲ್ಲೆಲ್ಲೂ  ಗುಂಡಿನ ಸದ್ದು, ರೋದನ, ನರಳಾಟಗಳೇ ಕಂಡು ಬರುತ್ತಿವೆ. ಉಗ್ರರನ್ನು ಮಟ್ಟ ಹಾಕಲು ಸೇನಾಪಡೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇದೇ ಅಲ್ ಶಬಾಬ್ ಉಗ್ರರು ಕಳೆದ 2013ರಲ್ಲಿ ಕೀನ್ಯಾದ ನೈರೋಬಿಯದ  ಮಾಲ್‌ವೊಂದರ ಮೇಲೆ ದಾಳಿನಡೆಸಿ 67 ಜನರನ್ನು ಕೊಂದು ಹಾಕಿದ್ದರು. ಅದನ್ನು ಬಿಟ್ಟರೆ ಇಂದಿನ ಈ ಹತ್ಯಾಕಾಂಡ ಕೀನ್ಯಾದ ಇತಿಹಾಸದಲ್ಲೇ ಅತ್ಯಂತ ಕರಾಳ ಕೃತ್ಯವಾಗಿದೆ. ಶಬಾಬ್ ಉಗ್ರರ ಈ ದುಷ್ಕೃತ್ಯವನ್ನು ವಿಶ್ವದಾದ್ಯಂತ ಅನೇಕ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

Write A Comment