ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರಪಂಚದ ಹಲವು ದೇಶಗಳು ಮಾರ್ಚ್ 8ರಂದು ಆಚರಿಸುತ್ತವೆ. 104 ವರ್ಷಗಳ ಹಿಂದೆ ಮಹಿಳೆಯರು ನಿರ್ಮಿಸಿದ ಇತಿಹಾಸ ಇಂದು ಸ್ಮರಣೀಯವಾಗಿದೆ. ಮತದಾನದ ಹಕ್ಕಿಗಾಗಿ ಮಹಿಳೆಯರು ನಡೆಸಿದ ಹೋರಾಟದ ಫಲವಾಗಿ 1902ರ ನಂತರ ಒಂದೊಂದೆ ದೇಶಗಳು ಮಹಿಳೆಯರಿಗೆ ಚುನಾಯಿಸುವ ಹಕ್ಕನ್ನು ನೀಡಿದವು. ಇಂಗ್ಲೆಂಡ್‌ನಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ನಂತರ ಕಡಿಮೆ ಕೂಲಿಗೆ ಸಿಗುವ ದೊಡ್ಡ ಸಂಖ್ಯೆಯ ಮಹಿಳಾ ಶ್ರಮವನ್ನು ಕೈಗಾರಿಕೆಗಳಿಗೆ ತೊಡಗಿಸಲಾಯಿತು. ಬಿಡಿ ಬಿಡಿಯಾಗಿದ್ದ ಮಹಿಳೆಯರು ಬಟ್ಟೆ ಗಿರಣಿಯಲ್ಲಿ, ಸಿಗರೆಟ್ ಸುತ್ತುವ ಕಾರ್ಖಾನೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ದುಡಿಮೆಯಲ್ಲಿ ತೊಡಗಿದರು. ಮಾರ್ಚ್ 8 ಮಹಿಳಾ ಹೋರಾಟದ ಇತಿಹಾಸದಲ್ಲಿ ಒಂದು ಅವಿಸ್ಮರಣಿಯ ದಿನ. ದುಡಿತದ ಅವಧಿಯನ್ನು 10 ಗಂಟೆಗೆ ಸೀಮಿತಗೊಳಿಸಬೇಕು, ದುಡಿಮೆಗೆ ಪೂರಕವಾದ ವಾತಾವರಣ ಕಲ್ಪಿಸಬೇಕು, ಮತದಾನದ ಹಕ್ಕು ನೀಡಬೇಕು ಹೀಗೆ ಹಲವಾರು ಆರ್ಥಿಕ ಮತ್ತು ರಾಜಕೀಯ ಬೇಡಿಕೆಗಳನ್ನಿಟ್ಟುಕೊಂಡು ಮಾಲಕ ವರ್ಗದ ಅಮಾನವೀಯ ಶೋಷಣೆ ವಿರುದ್ಧ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಅಮೆರಿಕದ ನ್ಯೂಯಾರ್ಕ್ ನಗರದ ರಟ್ಗೇರ್ ಚೌಕದಲ್ಲಿ ಮೆರವಣಿಗೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡರು. ಕಮ್ಯುನಿಷ್ಟ್ ನಾಯಕಿ ಕ್ಲಾರಾಜೆಟ್ಕಿನ್ ಈ ಹೋರಾಟದ ನೇತೃತ್ವ ವಹಿಸಿದ್ಧರು. 1910ರಲ್ಲಿ ಕೂಪನ್ ಹೇಗನ್‌ನಲ್ಲಿ ನಡೆದ ಸೋಷಿಯಲಿಸ್ಟ್ ಮಹಿಳೆಯರ ಸಮಾವೇಶದಲ್ಲಿ 17 ದೇಶದ ಸುಮಾರು 100 ಮಹಿಳೆಯರು ಸೇರಿದ್ದರು. ಆ ಸಮಾವೇಶದಲ್ಲಿ ಕ್ಲಾರಾಜೆಟ್ಕಿನ್‌ರವರ ಪ್ರಸ್ತಾಪದಂತೆ ಮಾರ್ಚ್ 8ನ್ನು ದುಡಿಯುವ ಮಹಿಳೆಯರ ದಿನಾಚರಣೆಯಾಗಿ ಆಚರಿಸುವ ತಿರ್ಮಾನ ಕೈಗೊಳ್ಳಲಾಯಿತು.
ಅಂತಾರಾಷ್ಟ್ರೀಯ ದುಡಿವ ಮಹಿಳೆಯರ ದಿನಾಚರಣೆಯಿಂದ ದುಡಿವ ಪದವನ್ನು ಕಿತ್ತು ವಿಶ್ವಸಂಸ್ಥೆಯು 1975ನ್ನು ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಎಲ್ಲಾ ದೇಶಗಳು ಒಂದು ಸಾಂಪ್ರದಾಯಿಕ ಆಚರಣೆಯಂತೆ ನಡೆಸುತ್ತಿವೆ. ದಮನದ ವಿರುದ್ಧ ಹೋರಾಡಿದ ಮಹಿಳಾ ಪರಂಪರೆಯನ್ನು ಮರೆಮಾಚಿ ಕೆಲವೇ ಮಹಿಳೆಯರ ಆರ್ಥಿಕ, ರಾಜಕೀಯ ಸಾಧನೆಗಳನ್ನು ಗುರುತಿಸಿ ಸನ್ಮಾನಿಸುವ ದಿನವನ್ನಾಗಿ ಮಹಿಳಾ ದಿನ ಆಚರಣೆಯಾಗುತ್ತಿದೆ. ಸೌಂದರ್ಯ ಸಾಧನಗಳನ್ನು ಮಾರಾಟ ಮಾಡುವ ಕಂಪೆನಿಗಳು ಮಹಿಳಾ ದಿನವನ್ನು ಆಚರಿಸಿ ತಮ್ಮ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಇನ್ನು ಕೆಲವು ಸಂಸ್ಥೆಗಳು ಮಹಿಳಾ ರಾಜಕಾರಣಿಗಳನ್ನು, ಉದ್ದಿಮೆಪತಿಗಳನ್ನು, ಕ್ರೀಡೆಯಲ್ಲಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡುವ ಮೂಲಕ ಮಹಿಳಾ ದಿನವನ್ನು ಆಚರಿಸುತ್ತಿವೆ. ಕೆಲವು ಸಂಸ್ಥೆಗಳು ಮಹಿಳೆಯರಿಗೆ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಆಚರಿಸುತ್ತವೆ. ಶೋಷಣೆಯನ್ನೆ ತಮ್ಮ ಮೂಲ ಬಂಡವಾಳ ಮಾಡಿಕೊಂಡಿರುವ ಕಾರ್ಪೊರೇಟ್ ಕಂಪೆನಿಗಳು ತಾವು ಉತ್ಪಾದಿಸುವ ಗೃಹಬಳಕೆ ವಸ್ತುಗಳಾದ ಮಿಕ್ಸಿ, ಗ್ರೈಂಡರ್, ಫ್ರಿಜ್, ವಾಷಿಂಗ್ ಮೆಷಿನ್‌ಗಳು ಮಹಿಳೆಯರ ಬದುಕನ್ನು ಬದಲಾಯಿಸುವ ಸಾಧನಗಳೆಂದು ಹಲವಾರು ಆಫರ್‌ಗಳನ್ನು ಕೊಡುವ ಮೂಲಕ ಮಹಿಳಾ ದಿನವನ್ನು ಆಚರಿಸುತ್ತವೆ. ಜೊತೆಗೆ ಗೃಹ ಬಳಕೆ ವಸ್ತುಗಳನ್ನು ಮಾರಾಟ ಮಾಡುವ ಪ್ರಚಾರಕಿಗಳಾಗಿ ಮಹಿಳೆಯರನ್ನು ಬಳಸಿಕೊಳ್ಳುತ್ತಿವೆ.
ಕಡಿಮೆ ಕೂಲಿಗೆ ತಮ್ಮ ಶ್ರಮವನ್ನು ಮಾರುತ್ತಿರುವ ಮಹಿಳೆಯರು ಅಂದು ಮುಂದಿಟ್ಟಿದ್ದ ಬೇಡಿಕೆಗಳಾದ ಕೂಲಿ ತಾರತಮ್ಯ, ಕೆಲಸದ ಸ್ಥಳದಲ್ಲಿ ಕೆಲಸಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಬೇಕೆಂಬ ಮಹಿಳೆಯರ ಬೇಡಿಕೆಗಳು ಈಗಲೂ ಬೇಡಿಕೆಯಾಗಿಯೇ ಉಳಿದಿವೆ. ಮಹಿಳೆಯರ ಹೋರಾಟದ ಪರಂಪರೆಯನ್ನು ಮರೆಮಾಚಿ ಮಹಿಳೆಯರ ವ್ಯಕ್ತಿಗತ ಸಾಧನೆಯೇ ಮುಖ್ಯ ಎಂದು ಬಿಂಬಿಸುವಲ್ಲಿ ರಾಜಕೀಯ, ಆರ್ಥಿಕ, ಧಾರ್ಮಿಕ ಸಂಸ್ಥೆಗಳು, ಮುಖ್ಯವಾಗಿ ಕಾರ್ಪೊರೇಟ್ ಸಂಸ್ಥೆಗಳು ಯಶಸ್ವಿಯಾಗಿವೆ. ಮಹಿಳೆ ಸುಂದರವಾಗುವುದು ಹೇಗೆ ಎನ್ನುವ ಜಾಹೀರಾತುಗಳೆ ಇವರ ಬಂಡವಾಳವಾಗಿದೆ. ಮಹಾನಗರಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ದುಡಿಯುತ್ತಿರುವ ಗಾರ್ಮೆಂಟ್ಸ್ ಮಹಿಳೆಯರು, ಐಟಿ ಬಿಟಿಯಲ್ಲಿ ಕೆಲಸ ಮಾಡುವ ಮಹಿಳೆಯರು, ಕಾಲ್ ಸೆಂಟರ್ ಮಹಿಳೆಯರು, ಬೀಡಿ ಕಾರ್ಮಿಕರು ಕೆಲಸದ ಅತಿಯಾದ ಒತ್ತಡದಿಂದ ಬಳಲುತ್ತಿದ್ದಾರೆ. ಕಡಿಮೆ ವೇತನ ಪಡೆಯುತ್ತಿದ್ದಾರೆ. ಲೈಂಗಿಕ ಕಿರುಕುಳ, ಅತ್ಯಾಚಾರ, ಮಾಲಕರ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಈ ರೀತಿ ಒತ್ತಡಕ್ಕೆ ಸಿಕ್ಕಿ ದೈಹಿಕವಾಗಿ, ಮಾನಸಿಕವಾಗಿ ಕುಗ್ಗುವ, ಅತ್ಯಚಾರಕ್ಕೊಳಗಾಗುವ, ಕೊಲೆಯಾಗುವ ಮಹಿಳೆಯರ ವಿಚಾರದಲ್ಲಿ ಕಾನೂನುಗಳು ನಾಮಕಾವಸ್ಥೆಯಾದರೆ, ಸರಕಾರ ನಿರ್ಲಕ್ಷ ತಾಳಿದೆ. ಮಹಿಳೆಯರ ಸಬಲೀಕರಣ, ಮಹಿಳಾವರ್ಷ, ಮಹಿಳಾ ದಿನಾಚರಣೆ ಇಂತಹ ಘೋಷಣೆಗಳಿವೆ. ಆದರೆ ಪ್ರತಿಭೆಯಲ್ಲಿ, ಸಾಮರ್ಥ್ಯದಲ್ಲಿ ಪುರುಷರಿಗೆ ಸರಿಸಾಟಿಯಾಗಿ ಮಹಿಳೆಯರು ಸ್ಪರ್ಧಿಸುತ್ತಿದ್ದರೂ, ಮಹಿಳೆಯರನ್ನು ಲೈಂಗಿಕ ವಸ್ತುಗಳಂತೆ, ಮಕ್ಕಳನ್ನು ಹೆರುವ ಯಂತ್ರದಂತೆ, ಸಂಪ್ರದಾಯ ಸಂಸ್ಕೃತಿಯನ್ನು ಉಳಿಸಬೇಕಾದ ವಕ್ತಾರಳಂತೆ ಬಿಂಬಿಸಲಾಗುತ್ತಿದೆ. ಆದರೆ ಮತ್ತೊಂದು ಕಡೆ ಮಹಿಳೆಯರನ್ನು ಅರೆ ನಗ್ನವಾಗಿ ಜಾಹೀರಾತುಗಳಲ್ಲಿ, ಸಿನೆಮಾಗಳಲ್ಲಿ ತೋರಿಸಿ ಅವಳ ದೇಹವನ್ನೆ ಮಾರಾಟದ ತಂತ್ರವಾಗಿ ಬಳಸಲಾಗುತ್ತಿದೆ. ಇತ್ತೀಚೆಗಂತೂ ಆಧುನಿಕ ತಂತ್ರಜ್ಞಾನದ ಫಲವಾಗಿ ಇಂಟರ್‌ನೆಟ್, ಮೊಬೈಲ್ ಅಪ್ಲಿಕೇಷನ್‌ಗಳಲ್ಲಿ ಹರಿದಾಡುವ ಮೆಸೇಜ್, ನೀಲಿ ಚಿತ್ರಗಳು ಮಹಿಳೆಯರ ವ್ಯಕ್ತಿತ್ವವನ್ನು ಇನ್ನೂ ಗೌಣ ಗೊಳಿಸುವುದಲ್ಲದೆ ಯುವ ಜನಾಂಗ ಹಾದಿ ತಪ್ಪಲು ಪ್ರೇರಣೆಯಾಗುತ್ತಿದೆ. ಅತ್ಯಾಚಾರದ ಪ್ರಮಾಣ ಈ ಮಟ್ಟಕ್ಕೆ ಹೆಚ್ಚಲು ಇದು ಮುಖ್ಯ ಕಾರಣವಾಗಿದೆ. ಸಿನೆಮಾ, ಮಾಧ್ಯಮಗಳಲ್ಲಿ ಹೆಣ್ಣನ್ನು ಕೀಳಾಗಿ ಚಿತ್ರಿಸಲಾಗುತ್ತದೆ. ಹೆಣ್ಣು ಸಂಸ್ಕೃತಿಯ ಪ್ರತಿಬಿಂಬ ಎಂದು ಎಲ್ಲಾ ಹೊಣೆಗಾರಿಕೆಯನ್ನು ಅವಳ ಮೇಲೆ ಹೇರುವ ಸಾಮಾಜಿಕ, ಧಾರ್ಮಿಕ ಸಂಸ್ಥೆಗಳು ಒಂದೆಡೆಯಾದರೆ ಕೆಲವರಿಗೆ ಮಹಿಳೆಯನ್ನು ಅರೆನಗ್ನವಾಗಿ ತೋರಿಸುವುದೆ ಹೆಚ್ಚು ಆದಾಯ ತರುವ ಉದ್ಯಮವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಶೇಕಡಾ 50ರ ಮಾತಂತಿರಲಿ 33%ಕ್ಕೂ ಹೋರಾಟ ನಡೆಯುತ್ತಿದೆ. ದಕ್ಷಿಣ ಏಶ್ಯಾದ ಯಾವುದೇ ದೇಶದ ರಾಜಕೀಯ ಪ್ರಾತಿನಿಧ್ಯದಲ್ಲೂ ಮಹಿಳೆಯರ ಸ್ಥಾನ 10% ದಾಟಿಲ್ಲ. ದುಡಿಮೆಯಲ್ಲಿ 60%ಕ್ಕಿಂತ ಹೆಚ್ಚು ಪಾಲಿದ್ದರೂ ಕೇವಲ 10%ದಷ್ಟು ಆದಾಯ ಪಡೆದು, ಕೇವಲ 1% ಆಸ್ತಿಯ ಒಡೆತನ ಹೊಂದಿದ್ದಾರೆ.
ಹೀಗೆ ಎಲ್ಲ ಸಂಕಷ್ಟಗಳಿಗೂ ಮಹಿಳೆಯರು ಸುಲಭವಾಗಿ ದಾಳವಾಗುತ್ತಿರುವುದು ಸಮಾಜದಲ್ಲಿ ಪುರುಷ ಮೇಲು ಮಹಿಳೆ ಕೀಳೆಂಬ ಮೌಲ್ಯದ ಕಾರಣಕ್ಕೆ. ಪ್ರಪಂಚ ಮಟ್ಟದಲ್ಲಿ ಈ ಮೌಲ್ಯಕ್ಕೆ 2,500ಕ್ಕಿಂತ ಹೆಚ್ಚು ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ಆರ್ಯನ್ನರ ಪ್ರವೇಶದೊಂದಿಗೆ ವರ್ಗ ಸಮಾಜ, ಜಾತಿ ಸಮಾಜ ರೂಪುಗೊಂಡು ಮಾತೃಪ್ರಧಾನತೆಯ ಸಮಾಜ ಪುರುಷಾಧಿಪತ್ಯ ಮೌಲ್ಯಗಳ ಸಮಾಜವಾಗಿ ರೂಪುಗೊಂಡಿತು. ಆ ನಂತರದಲ್ಲಿ ಕುಟುಂಬ, ಸರಕಾರ, ಕಾನೂನು, ಮಾಧ್ಯಮ, ಆರ್ಥಿಕ ವ್ಯವಸ್ಥೆ, ಶಿಕ್ಷಣ ಕ್ಷೇತ್ರ ಹೀಗೆ ಎಲ್ಲಾ ಸಂಸ್ಥೆಗಳು ಲಿಂಗತಾರತಮ್ಯ ಎನ್ನುವುದು ಸಮಾಜದ ಸಹಜ ವಿದ್ಯಮಾನ ಎನ್ನುವ ಮಟ್ಟಿಗೆ ಅಧಿಕೃತ ಮಾಡುತ್ತಾ ಬಂದಿವೆ. ಮೊದಲಿಗೆ ಮಹಿಳೆಯ ಶ್ರಮಶಕ್ತಿಯ ಮೇಲೆ, ಮರು ಉತ್ಪಾದನಾ ಶಕ್ತಿಯ ಮೇಲೆ, ಅವಳ ಲೈಂಗಿಕತೆಯ ಮೇಲೆ, ಚಲನೆಯ ಮೇಲೆ, ಆಸ್ತಿಯ ಹಕ್ಕಿನ ಮೇಲೆ, ಹೀಗೆ ನಿಧಾನವಾಗಿ ನಿಯಂತ್ರಣ ಸಾಧಿಸುತ್ತಾ ಬರಲಾಯಿತು.
ಕ್ರಮೇಣ ಮಹಿಳೆಯರು ಸಹನೆಯ ಪರಿಧಿಯನ್ನು ದಾಟಿ, ವೈಚಾರಿಕವಾಗಿ ತಮ್ಮ ಬಂಧನದ ಬದುಕಿನ ಬಗ್ಗೆ, ಸಿಗಬೇಕಾದ ಹಕ್ಕಿನ ಬಗ್ಗೆ ಜಾಗೃತರಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ದುಡಿಮೆಗೆ ತಕ್ಕ ಫಲ, ಕಾನೂನಿನ ಸೌಲಭ್ಯಗಳನ್ನು ಹೋರಾಟದಿಂದಲೇ ಪಡೆದಿದ್ದಾರೆ. 21ನೆ ಶತಮಾನದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಉನ್ನದ ಹುದ್ದೆಗಳಲ್ಲಿದ್ದಾರೆ. ಪ್ರಭುತ್ವದ ನೀತಿಯ ಬದಲಾವಣೆಯ ಕಾರಣಕ್ಕೆ ರಾಕೀಯದಲ್ಲೂ ಪ್ರಾತಿನಿಧ್ಯ ಸಿಗುತ್ತಿದೆ. ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾತಂತ್ರ್ಯ ಎಲ್ಲದರಲ್ಲೂ ಗಣನೀಯ ಬದಲಾವಣೆ ಬಂದಿದೆ. ಆದರೂ ಈ ಬದಲಾವಣೆಯೊಂದಿಗೆ ಅವಳ ಸಮಸ್ಯೆಗಳ ಸ್ವರೂಪವು ಬದಲಾಗುತ್ತಿದೆ. ಮತ್ತು ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಿದೆ. ಮನೆಯ ಒಳಗೂ ಮತ್ತು ದುಡಿಮೆಯ ಸ್ಥಳದಲ್ಲೂ ಅವಳು ನಿರ್ವಹಿಸ ಬೇಕಾದ ಜವಾಬ್ದಾರಿ ಅವಳ ಒತ್ತಡವನ್ನು ಹೆಚ್ಚಿಸುತ್ತಿದೆ. ಮಹಿಳೆ ಎಲ್ಲೂ ಸುರಕ್ಷಿತಳಲ್ಲ ಎನ್ನುವ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಮನೆಯಲ್ಲಿ, ಮಠದಲ್ಲಿ, ಶಾಲೆಯಲ್ಲಿ, ಕಾನೂನು, ಪೊಲೀಸು ಎಲ್ಲಾ ಕಡೆ ಅವಳ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯಗಳು ನಡೆಯುತ್ತಿವೆ. ಇತ್ತೀಚೆಗಂತೂ ಮುಗ್ಧ ಮಕ್ಕಳಿಂದ ಹಿಡಿದು ಮುದುಕಿಯರ ಮೇಲೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರ ಮೇಲೆ ನಡೆಯುವ ಎಲ್ಲಾ ದೌರ್ಜನ್ಯಕ್ಕಿಂತಲೂ ಅತ್ಯಾಚಾರ ಭೀಕರವಾದುದು. ಅತ್ಯಾಚಾರ ಎನ್ನುವುದು ಮಹಿಳೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಸುತ್ತದೆ. ಅವಳ ವ್ಯಕ್ತಿತ್ವವನ್ನು ಬಟ್ಟೆಯಲ್ಲೂ ಬೆತ್ತಲೆಯಾಗಿ ನೋಡುವ ಮೃಗೀಯ ಮನಸ್ಥಿತಿಯಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯನ್ನು ಕೇವಲ ಸಾಂಪ್ರದಾಯಿಕ ಆಚರಣೆಯಾಗಿಸದೇ ದಮನದ ವಿರುದ್ಧದ ಸಮಾನತೆಯ ಬದುಕಿನ, ಆರೋಗ್ಯಕರ ಸಮಾಜಕ್ಕಾಗಿನ ಹೋರಾಟದ ದಿನವನ್ನಾಗಿ ನಡೆಸಬೇಕಾಗಿದೆ. ಒಂದು ಮನೆಯ ಹೆಣ್ಣು ಅತ್ಯಾಚಾರಕ್ಕೊಳಗಾದರೆ ಆ ಮನೆಯಲ್ಲಿರುವ ಅಣ್ಣ, ತಮ್ಮ, ತಂದೆ ಎಲ್ಲರಿಗೂ ಮಾನಸಿಕ ಒತ್ತಡ ನಿರ್ಮಾಣವಾಗುತ್ತದೆ. ಹಾಗಿರುವಾಗ ಅತ್ಯಾಚಾರ ಮುಕ್ತ, ಶೋಷಣೆ ರಹಿತ ಸಮಾಜ ಸ್ತ್ರೀ ಮತ್ತು ಪುರುಷರಿಬ್ಬರ ಆದ್ಯತೆಯಾಗಿದೆ. ಆರೋಗ್ಯಕರ ಸಮಾಜಕ್ಕಾಗಿನ ಹೋರಾಟವನ್ನು ಮಹಿಳೆಯರು ಮತ್ತು ಪುರುಷರು ಸೇರಿಯೇ ನಡೆಸಿದಾಗ ಮಾತ್ರ ಪ್ರತಿ ಮಹಿಳಾ ದಿನಚರಣೆಯು ಅರ್ಥಪೂರ್ಣವಾಗುತ್ತದೆ.