ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಶಿಯಾ ಪಂಗಡದವರನ್ನು ಗುರಿಯಾಗಿರಿಸಿಕೊಂಡು ಮಸೀದಿಯೊಂದರಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟಿಸಲಾಗಿದ್ದು, ಹಲವು ಮಕ್ಕಳು ಸೇರಿದಂತೆ ಕನಿಷ್ಠ 61 ಜನರು ಸಾವನ್ನಪ್ಪಿದ್ದಾರೆ. 55 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಬಹುತೇಕರ ಸ್ಥಿತಿ ಗಂಭೀರವಾಗಿದೆ.
ಕರಾಚಿಯಿಂದ ಸುಮಾರು 470 ಕಿ.ಮೀ. ದೂರದಲ್ಲಿನ ಶಿಕಾರ್ಪುರದ ಲಖಿದರ್ ಪ್ರದೇಶದಲ್ಲಿ ಇರುವ ಸೆಂಟ್ರಲ್ ಇಮಾಮ್ಬರ್ಗಾ ಮಸೀದಿಯಲ್ಲಿ ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆ ವೇಳೆ ಈ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮಸೀದಿಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದಿದೆ. ಇದರಡಿಯಲ್ಲಿ ಸಿಲುಕಿ ಹಲವರು ಅಸುನೀಗಿದ್ದಾರೆ.
ಜುಂದುಲ್ಲಾ ಉಗ್ರರ ಗುಂಪು ಈ ದಾಳಿಯ ಹೊಣೆಯನ್ನು ಹೊತ್ತಿದ್ದು, ‘ಶಿಯಾಗಳು ನಮ್ಮ ಶತ್ರುಗಳು’ ಎಂದು ಹೇಳಿದೆ. ಮೊದಲು ತಾಲಿಬಾನ್ಗಳೊಂದಿಗೆ ಗುರುತಿಸಿಕೊಂಡಿದ್ದ ಈ ಗುಂಪು, ಈಗ ಇಸ್ಲಾಮಿಕ್ ಸ್ಟೇಟ್ ಉಗ್ರರ ಜೊತೆಗಿದೆ.
‘ರಿಮೋಟ್ನಿಂದ ಬಾಂಬ್ ಸ್ಫೋಟಿಸಲಾಗಿದೆ. ತಾರಸಿಯ ಅವಶೇಷದಡಿಯಲ್ಲಿ ಸಿಲುಕಿದ್ದ ಗಾಯಾಳುಗಳನ್ನು ರಕ್ಷಿಸಲಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ಲಾ ಮೆಹರ್ ಅವರ ಹೇಳಿಕೆಯನ್ನು ‘ಜಿಯೊ’ ವಾಹಿನಿ ವರದಿ ಮಾಡಿದೆ.
ವಿಧ್ವಂಸಕರ ಈ ಕೃತ್ಯವನ್ನು ಪ್ರಧಾನಿ ನವಾಜ್ ಷರೀಫ್ ಅವರು ತೀವ್ರವಾಗಿ ಖಂಡಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಸಾವನ್ನಪ್ಪಿದವರ ಗೌರವಾರ್ಥ ಸಿಂಧ್ ಪ್ರಾಂತೀಯ ಸರ್ಕಾರ ಶುಕ್ರವಾರ ಶೋಕಾಚರಣೆ ಘೋಷಿಸಿದೆ.
ಪಾಕ್: 20 ಲಕ್ಷ ಸಿಮ್ ನಿಷ್ಕ್ರಿಯ
ಇಸ್ಲಾಮಾಬಾದ್ (ಪಿಟಿಐ): ಭದ್ರತಾ ಕಾರಣಗಳಿಗಾಗಿ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು ದೇಶದ ಸುಮಾರು 20 ಲಕ್ಷ ಮೊಬೈಲ್ ಸಿಮ್ಗಳನ್ನು ನಿಷ್ಕ್ರಿಯಗೊಳಿಸಿದೆ. ದೇಶದಲ್ಲಿ 10.30 ಕೋಟಿ ಸಿಮ್ಗಳನ್ನು ಪರಿಶೀಲನೆ ನಡೆಸದೆ ಮಾರಾಟ ಮಾಡಲಾಗಿದೆ. ಈ ಬಗ್ಗೆ 91 ದಿನಗಳ ಒಳಗೆ ಪರಿಶೀಲನೆ ನಡೆಸುವಂತೆ ದೂರಸಂಪರ್ಕ ಪ್ರಾಧಿಕಾರಕ್ಕೆ ಸರ್ಕಾರ ಕಾಲಾವಕಾಶವನ್ನು ನೀಡಿತ್ತು. ಪೆಶಾವರದ ಸೇನಾ ಶಾಲೆಯ ಮೇಲೆ ನಡೆದ ದಾಳಿ ನಂತರವಷ್ಟೇ ಸರ್ಕಾರ ಈ ಆದೇಶ ಹೊರಡಿಸಿತ್ತು ಎಂದು ‘ಡಾನ್’ ವರದಿ ಪತ್ರಿಕೆ ಮಾಡಿದೆ.