ಅಂತರಾಷ್ಟ್ರೀಯ

ಐಎಸ್‌ ಮುಖಂಡನ ಪತ್ನಿ, ಪುತ್ರಿ ಸೆರೆ; ಉಗ್ರರ ನಾಯಕ ಬಾಗ್ದಾದಿಗೆ ಭಾರಿ ಹೊಡೆತ

Pinterest LinkedIn Tumblr

-image-9_1417518702702ಬೈರೂತ್‌ (ರಾಯಿಟರ್ಸ್‌): ಇಸ್ಲಾ­ಮಿಕ್‌ ಸ್ಟೇಟ್‌ (ಐಎಸ್‌) ಮುಖ್ಯಸ್ಥ ಅಬು ಬಕರ್‌ ಅಲ್‌ ಬಾಗ್ದಾದಿಯ ಒಬ್ಬಳು ಪತ್ನಿ ಮತ್ತು ಮಗಳನ್ನು ಒಂಬತ್ತು ದಿನಗಳ ಹಿಂದೆ ಲೆಬನಾನ್‌ ಸೇನೆ ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ. ಸಿರಿಯಾದಿಂದ ಹೊರ ಹೋಗುವ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಭದ್ರತಾ ಪಡೆಯ ಅಧಿಕಾರಿಗಳು ಹೇಳಿದ್ದಾರೆ.

ಬಾಗ್ದಾದಿಯ ಪತ್ನಿಯರಲ್ಲಿ ಈಕೆ ಒಬ್ಬಳು ಎಂದು ಮಾತ್ರ ಹೇಳಿರುವ ಭದ್ರತಾ ಪಡೆಗಳು ಆಕೆಯ ಹೆಸರು ಅಥವಾ ರಾಷ್ಟ್ರೀಯತೆಯನ್ನು ಬಹಿರಂಗಪಡಿಸಿಲ್ಲ. ವಿದೇಶಿ ಗುಪ್ತಚರ ಸಂಸ್ಥೆಗಳ ಸಮನ್ವಯದೊಂದಿಗೆ ಈಕೆ­ಯನ್ನು ಬಂಧಿಸಲಾಗಿದೆ ಎಂದು ಲೆಬನಾನ್‌ನ ಪತ್ರಿಕೆ ‘ಅಲ್‌ ಸಫಿರ್‌’ ವರದಿ ಮಾಡಿದೆ. ಬಾಗ್ದಾದಿಗೆ ಎಷ್ಟು ಪತ್ನಿಯರಿದ್ದಾರೆ ಎಂಬ ಮಾಹಿತಿಯೂ ಲಭ್ಯ ಇಲ್ಲ.

ಈ ಬಂಧನ ಬಾಗ್ದಾದಿಗೆ ದೊಡ್ಡ ಹೊಡೆತವಾಗಿದೆ. ಸಿರಿಯಾ ಮತ್ತು ಇರಾಕ್‌ನಲ್ಲಿ ವಶಕ್ಕೆ ಪಡೆದಿರುವ ಪ್ರದೇಶವನ್ನು ತನ್ನ ‘ಖಲೀಫೇಟ್‌’ ಎಂದು ಘೋಷಿಸಿ ಹಲವು ವಿದೇಶಿ ಮತ್ತು ಇರಾಕಿ ಪ್ರಜೆಗಳನ್ನು ಅಪಹರಣ ಮಾಡಿರುವ ಬಾಗ್ದಾದಿಯ ಜತೆ ಚೌಕಾಶಿಗೆ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ತನ್ನ ಒಬ್ಬಳು ಮಗಳೊಂದಿಗೆ ಸಂಚರಿಸುತ್ತಿದ್ದ ಬಾಗ್ದಾದಿಯ ಪತ್ನಿಯನ್ನು ವಶಕ್ಕೆ ಪಡೆಯಲಾಗಿದೆ. ಮಗಳ ಡಿಎನ್‌ಎ ಪರೀಕ್ಷೆ ನಡೆಸಿ, ಆಕೆ ಬಾಗ್ದಾದಿಯ ಮಗಳು ಹೌದು ಎಂಬುದನ್ನು ದೃಢಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಲೆಬನಾನ್‌ನಲ್ಲಿ ಆಕೆಯನ್ನು ವಶಕ್ಕೆ ಪಡೆಯ­ಲಾಗಿದ್ದು, ಅಧಿ­ಕಾರಿಗಳು ಆಕೆಯ ವಿಚಾರಣೆ ನಡೆಸು­ತ್ತಿದ್ದಾರೆ. ಈ ಬಂಧನಕ್ಕೆ ಸಂಬಂಧಿಸಿ ಐಎಸ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಲೆಬನಾನ್‌ನ ಪೂರ್ವ ಭಾಗದಲ್ಲಿರುವ ಇರಾಕ್‌ ಮತ್ತು ಸಿರಿಯಾದ ಪ್ರದೇಶಗಳು ಐಎಸ್‌ ವಶದಲ್ಲಿವೆ. ಹಾಗಾಗಿ ಲೆಬ ನಾನ್‌ ಭದ್ರತಾ ಪಡೆಗಳು ಈ ಸಂಘಟನೆಯೊಂದಿಗೆ ಸಹಾನು­ಭೂತಿ ಹೊಂದಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿವೆ. ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಲೆಬನಾನ್‌ನಲ್ಲಿಯೂ ಐಎಸ್‌ ಪ್ರಭಾವವನ್ನು ವಿಸ್ತರಿಸಲು ಯತ್ನಿಸಿದ ಐಎಸ್‌ನ ಹಲವು ಶಂಕಿತ ಉಗ್ರರನ್ನು ಕಳೆದ ಕೆಲವು ತಿಂಗಳಲ್ಲಿ ಲೆಬನಾನ್‌ ಬಂಧಿಸಿದೆ.

Write A Comment