ಚೈನಾದ ಆಸ್ಪತ್ರೆಯೊಂದರಲ್ಲಿ ಪುರುಷರಿಗೂ ಹೆರಿಗೆ ಬೇನೆಯ ಶಾಕ್! ಹೌದು ಈ ಆಸ್ಪತ್ರೆಯಲ್ಲಿ ಮಹಿಳೆಯರು ಹೆರಿಗೆ ಸಮಯದಲ್ಲಿ ಅನುಭವಿಸುವ ನೋವನ್ನು ತಮ್ಮ ಅನುಭವದ ಭಾಗವನ್ನಾಗಿಸಿಕೊಳ್ಳಲು ಇಚ್ಛಿಸುವವರಿಗೆ ವಿದ್ಯುತ್ ಶಕ್ತಿಯ ಶಾಕ್ ನೆರವಿನಿಂದ ನೋವನ್ನು ಉಂಟುಮಾಡುವ ವಿನೂತನ ಕಾರ್ಯಕ್ರಮವೊಂದು ಜರುಗಿದೆ.
ಪೂರ್ವ ಚೈನಾದ ಐಮಾ ಹೆರಿಗೆ ಆಸ್ಪತ್ರೆಯಲ್ಲಿ ವಾರಕ್ಕೆ ಎರಡು ಬಾರಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸುಮಾರು ೧೦೦ ಜನ ಈ ಕೃತಕ ಹಿಂಸೆಗೆ ನೊಂದಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇವರಲ್ಲಿ ಬಹುತೇಕ ತಂದೆಯಾಗುತ್ತಿರುವವರೇ ಹೆಚ್ಚಿದ್ದು, ಇನ್ನು ಹಲವರು ಥ್ರಿಲ್ ಗೋಸ್ಕರ ಹೆರಿಗೆ ಬೇನೆಯನ್ನು ಅನುಭವಿಸಿದ್ದಾರೆ.
ಆದರೆ ಆಸ್ಪತ್ರೆಯ ನರ್ಸ್ ಹೇಳಿಕೆಯ ಪ್ರಕಾರ, ಯಾವ ಪುರುಷನೂ ಪೂರ್ಣ ಪ್ರಮಾಣದ ಹೆರಿಗೆ ಬೇನೆಯನ್ನು ಅನುಭವಿಸಲು ಸೋತಿದ್ದಾರಂತೆ! ಸಾಮಾನ್ಯವಾಗಿ ಮಹಿಳೆಯರು ಅನುಭವಿಸುವ ಅರ್ಧದಷ್ಟು ನೋವನ್ನು ಕೃತಕವಾಗಿ ಪುರುಷನಲ್ಲಿ ಉಂಟುಮಾಡಿದ ಕ್ಷಣ ನರಳಾಡಿ, ಕಿರುಚಾಡಿ ಅಲ್ಲಿಂದ ಬಿಡಿಸಿಕೊಂಡಿದ್ದಾರಂತೆ.
ಈ ಕಾರ್ಯಕ್ರಮ ಪುರುಷರಿಗೆ ತಮ್ಮ ಸಂಗಾತಿಯ ಮೇಲೆ ಹೆಚ್ಚಿನ ಸಹಾನುಭೂತಿ ಬೆಳೆಯಲಿ ಎಂಬ ದೃಷ್ಟಿಯಿಂದ ಹಮ್ಮಿಕೊಂಡಿದ್ದೇವೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.