
ನ್ಯೂಯಾರ್ಕ್, ಸೆ.29: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಐದು ದಿನಗಳ ತನ್ನ ಅಮೆರಿಕ ಪ್ರವಾಸದ ವೇಳೆ ಸೋಮವಾರ ಮುಂಜಾನೆ ನ್ಯೂಯಾರ್ಕ್‌ನಲ್ಲಿ ಏರ್ಪಡಿಸಲಾಗಿದ್ದ ಉಪಾಹಾರ ಕೂಟದಲ್ಲಿ ಅಮೆರಿಕದ ಪ್ರಮುಖ ಹನ್ನೊಂದು ನಿಗಮಗಳ ಮುಖ್ಯಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಮಾತುಕತೆಯ ವೇಳೆ ಮೋದಿಯವರು ಭಾರತದ ಮೂಲಸೌಲಭ್ಯಗಳ ಅಭಿವೃದ್ಧಿ ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿ ಮತ್ತು ಜೀವನಮಟ್ಟ ಸುಧಾರಣೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೃಹತ್ ಪ್ರಮಾಣದ ಹೂಡಿಕೆಗೆ ಹೆಚ್ಚಿನ ಮಹತ್ವ ನೀಡಿರುವುದಾಗಿ ವರದಿಗಳು ತಿಳಿಸಿವೆ.
ಪೆಪ್ಸಿಕೊ ಸಿಇಒ ಭಾರತೀಯ ಮೂಲದ ಇಂದಿರಾ ನೂಯಿ, ಗೂಗಲ್ ಮುಖ್ಯಸ್ಥ ಎರಿಕ್ ಶಿಮಿಡ್ ಹಾಗೂ ಸಿಟಿಗ್ರೂಪ್ ಮುಖ್ಯಸ್ಥ ಮೈಕೆಲ್ ಕೊರ್ಬಾಟ್ ಸೇರಿದಂತೆ ಹಲವು ಉನ್ನತ ಸಿಇಒಗಳೊಂದಿಗೆ ಮೋದಿ ಮಾತುಕತೆ ನಡೆಸಿರುವುದಾಗಿ ವರದಿಗಳು ತಿಳಿಸಿವೆ.








ಭಾರತದಲ್ಲಿ ವ್ಯಾಪಾರ ವಹಿವಾಟಿನ ವಾತಾವರಣವನ್ನು ಪರಿಣಾಮಕಾರಿಯನ್ನಾಗಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಉನ್ನತ ಅಧಿಕಾರಿಗಳೊಂದಿಗೆ ಮೋದಿ ಚರ್ಚಿಸಿರುವುದಾಗಿ ಮೂಲಗಳು ತಿಳಿಸಿವೆ.
‘‘ಭಾರತವು ಮುಕ್ತ ಮನಸ್ಸಿನ ರಾಷ್ಟ್ರವಾಗಿದೆ. ನಾವು ಬದಲಾವಣೆಯನ್ನು ಬಯಸುತ್ತೇವೆ. ಬದಲಾವಣೆ ಎಂಬುದು ಏಕಪಕ್ಷೀಯವಲ್ಲ. ನಾನು ನಾಗರಿಕರು, ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರೊಂದಿಗೆ ಚರ್ಚಿಸಿದ್ದೇನೆ’’ ಎಂದು ಪ್ರಧಾನಿ ಮೋದಿಯವರನ್ನು ಉಲ್ಲೇಖಿಸಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.
‘‘ಮೂಲಸೌಲಭ್ಯಗಳ ಅಭಿವೃದ್ಧಿಯು ಒಂದು ದೊಡ್ಡ ಅವಕಾಶವಾಗಿದೆ. ಇದು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ನಮ್ಮ ನಾಗರಿಕರ ಜೀವನಮಟ್ಟವನ್ನು ಸುಧಾರಿಸುತ್ತದೆ.’’ ಎಂದು ಸಿಇಒಗಳನ್ನು ಉದ್ದೇಶಿಸಿ ಮೋದಿ ಹೇಳಿದ್ದಾರೆ.
ಹೆಚ್ಚಿನ ಕಂಪೆನಿಗಳು ಈಗಾಗಲೇ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಅಸ್ತಿತ್ವವನ್ನು ಹೊಂದಿವೆ ಮತ್ತು ಅವುಗಳ ಮುಖ್ಯಸ್ಥರು ಭಾರತ ಸರಕಾರದೊಂದಿಗೆ ತಮ್ಮ ಸಂಬಂಧಗಳನ್ನು ಬಲಪಡಿಸಲು ಹಾಗೂ ರಾಷ್ಟ್ರದಲ್ಲಿನ ತಮ್ಮ ಉದ್ಯಮಗಳನ್ನು ವಿಸ್ತರಿಸುವ ಆಶಯ ವ್ಯಕ್ತಪಡಿಸಿದ್ದಾರೆ ಎಂದು ಮೋದಿ ಹೇಳಿದರು.
ಸೋಮವಾರ ಏರ್ಪಡಿಸಲಾಗಿದ್ದ ಉಪಾಹಾರ ಕೂಟದಲ್ಲಿ ಮಾಸ್ಟರ್‌ಕಾರ್ಡ್ ಸಿಇಒ ಅಜಯ್ ಬಂಗ, ಕಾರ್‌ಗಿಲ್ಸ್ ಮುಖ್ಯಸ್ಥ ಹಾಗೂ ಸಿಇಒ ಡೇವಿಡ್ ಡಬ್ಲು. ಮೆಕ್‌ಲೆನನ್, ಕ್ಯಾಟರ್‌ಪಿಲ್ಲರ್‌ನ ಡಾಗ್ಲಸ್ ಒಬರ್‌ಹೆಲ್ಮನ್, ಎಇಎಸ್‌ನ ಆ್ಯಂಡ್ರೆಸ್ ಗ್ಲೂಸ್ಕಿ ಮೊದಲಾದ ಅನೇಕರು ಉಪಸ್ಥಿತರಿದ್ದರು.
ಬೆಳಗ್ಗೆ ಒಂದು ತಾಸು ಕಾಲ ನಡೆದ ಉಪಾಹಾರ ಕೂಟದ ಬಳಿಕ ಮೋದಿಯವರು ಬೋಯಿಂಗ್, ಕೆಕೆಆರ್, ಬ್ಲಾಕ್‌ರಾಕ್, ಐಬಿಎಂ, ಜನರಲ್ ಎಲೆಕ್ಟ್ರಿಕ್ ಹಾಗೂ ಗೋಲ್ಡ್‌ಮನ್ ಸ್ಯಾಶಸ್ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದರು.