ರಾಷ್ಟ್ರೀಯ

ಸ್ಪೈಸ್‌ಜೆಟ್ ವಿಮಾನದಲ್ಲಿ ಮದುವೆ ! ಕೋವಿಡ್ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಪ್ರಯಾಣಿಕರ ವಿರುದ್ಧ ಕ್ರಮ

Pinterest LinkedIn Tumblr

ನವದೆಹಲಿ: ಸ್ಪೈಸ್‌ಜೆಟ್ ಚಾರ್ಟರ್ಡ್ ವಿಮಾನದಲ್ಲಿ ನಡೆದ ಮದುವೆ ವೇಳೆ ಕೋವಿಡ್ ನಿಯಮಗಳ ಉಲ್ಲಂಘನೆ ಆಗಿರುವುದನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಟೀಕಿಸಿದ ಬೆನ್ನಲ್ಲೇ ಪ್ರಯಾಣಿಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿಮಾನಯಾನ ಸಂಸ್ಥೆ ಸೋಮವಾರ ತಿಳಿಸಿದೆ.

“ಸ್ಪೈಸ್ ಜೆಟ್ ಬೋಯಿಂಗ್ 737 ಅನ್ನು ಮಧುರೈ ಟ್ರಾವೆಲ್ ಏಜೆಂಟ್ ಒಬ್ಬರು ಮೇ 23, 2021ಕ್ಕೆ ಬುಕ್ ಮಾಡಿದ್ದರು. ನಂತರ ವಿಮಾನದಲ್ಲಿ ನಡೆದ ಮದುವೆ ಸಂಭ್ರಮದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಪ್ರಯಾಣದ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ವಿವರಿಸಲಾಗಿತ್ತು. ಅಲ್ಲದೆ ಯಾವುದೇ ಚಟುವಟಿಕೆಗೆ ಅನುಮತಿ ನೀಡಿರಲಿಲ್ಲ. ಆದರೂ ವಿಮಾನದಲ್ಲಿ ಮದುವೆ ನಡೆದಿತ್ತು.

ವಿಮಾನ ನಿಲ್ದಾಣದಲ್ಲಿ ಮತ್ತು ಪ್ರಯಾಣದುದ್ದಕ್ಕೂ ವಿಮಾನದಲ್ಲಿ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಅನುಸರಿಸಬೇಕಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮತ್ತು ಸುರಕ್ಷತಾ ಮಾನದಂಡಗಳ ಬಗ್ಗೆ ಏಜೆಂಟ್ ಮತ್ತು ಅತಿಥಿ ಪ್ರಯಾಣಿಕರಿಗೆ ಲಿಖಿತವಾಗಿ ಮತ್ತು ಮೌಖಿಕವಾಗಿ ವಿವರವಾಗಿ ತಿಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.

ಆದರೆ ಈ ಯಾವುದೇ ಆದೇಶಗಳನ್ನು ಅನುಸರಿಸದ ಪ್ರಯಾಣಿಕರ ವಿರುದ್ಧ ವಿಮಾನಯಾನ ನಿಯಮಗಳ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಸ್ಪೈಸ್ ಜೆಟ್ ತಿಳಿಸಿದೆ.

ವಿಮಾನದಲ್ಲಿ ಮದುವೆ ನಡೆದ ಘಟನೆ ವರದಿಯಾಗುತ್ತಿದ್ದಂತೆ ವಿಮಾನದ ಸಿಬ್ಬಂದಿಯನ್ನು ಕರ್ತವ್ಯದಿಂದ ಹೊರಗಿಡಲು ಸೂಚಿಸಿದ್ದು ತನಿಖೆಗೆ ಡಿಜಿಸಿಎ ಆದೇಶಿಸಿತ್ತು. ಅಲ್ಲದೆ ಕೋವಿಡ್ 19 ಮಾರ್ಗಸೂಚಿಯನ್ನು ಉಲ್ಲಂಘಿಸಿದ ಎಲ್ಲ ಪ್ರಯಾಣಿಕರ ವಿರುದ್ಧ ದೂರು ದಾಖಲಿಸುವಂತೆ ಹೇಳಿತ್ತು.

ತಮಿಳುನಾಡಿನ ಮಧುರೈನಿಂದ ಚಾರ್ಟರ್ಡ್ ವಿಮಾನದಲ್ಲಿ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರ ಸಂಬಂಧಿಕರು ಮತ್ತು ಅತಿಥಿಗಳು ಒಂದೇ ವಿಮಾನದಲ್ಲಿದ್ದರು. ಭಾನುವಾರ ಸ್ಪೈಸ್ ಜೆಟ್ ವಿಮಾನವನ್ನು ಮಧುರೈ ಮೂಲದ ಖಾಸಗಿ ವ್ಯಕ್ತಿಯೊಬ್ಬರು ಸಮಾರಂಭಕ್ಕಾಗಿ ಕಾಯ್ದಿರಿಸಿದ್ದರು ಆದರೆ ಸಂಸ್ಧೆಗೆ ವಿಮಾನದಲ್ಲಿ ವಿವಾಹ ಮಾಡುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ.

Comments are closed.