ರಾಷ್ಟ್ರೀಯ

ಪ್ರೇಮಿಗಳ ದಿನ ವ್ಯಕ್ತಿಯೋರ್ವ ತನ್ನ ಪತ್ನಿಗೆ ಕಿಡ್ನಿಯನ್ನೇ ಗಿಫ್ಟ್ ಆಗಿ ನೀಡಿ ಸುದ್ದಿಯಾದ !

Pinterest LinkedIn Tumblr

ಗುಜರಾತ್: ಪ್ರೇಮಿಗಳ ದಿನ ವ್ಯಕ್ತಿಯೋರ್ವ ತನ್ನ ಪತ್ನಿಗೆ ನೀಡಿದ ಗಿಫ್ಟ್ ಈಗ ಭಾರಿ ಸುದ್ದಿಯಾಗುತ್ತಿದೆ. ಅಷ್ಟಕ್ಕೂ ನೀಡಿದ ಗಿಫ್ಟ್ ಏನು ? ಮುಂದೆ ಓದಿ….

ಈಗ ನಾವು ಹೇಳುತ್ತಿರುವ ಕಥೆ ಗುಜರಾತ್‌ನ ಅಹಮದಾಬಾದ್ ಮೂಲದ ವಿನೋದ್ ಪಟೇಲ್ ಮತ್ತು ರೀಟಾ ಪಟೇಲ್ ದಂಪತಿಯದ್ದು. ಇವರು ಆದರ್ಶ ದಂಪತಿ ಸಾಲಿಗೆ ಸೇರುತ್ತಾರೆ. 44 ವರ್ಷದ ರೀಟಾ ಕಳೆದ 3 ವರ್ಷಗಳಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ದೇಹದ ಇಮ್ಯೂನ್ ಸಿಸ್ಟಮ್ ತೊಂದರೆಯಿಂದ ಎರಡೂ ಕಿಡ್ನಿಗಳು ಕೆಲಸ ಮಾಡುವುದನ್ನೇ ನಿಲ್ಲಿಸಿವೆಯಂತೆ. ಇದಕ್ಕಾಗಿ ಚಿಕಿತ್ಸೆ ತೆಗೆದುಕೊಳ್ಳಲಾಗುತ್ತಿದ್ದರೂ ಆಗಾಗ ಅವರ ಆರೋಗ್ಯ ಹದಗೆಡುತ್ತಲೇ ಇತ್ತು. ಬೇರೆ ಕಿಡ್ನಿ ಹಾಕಿದರೆ ಸಮಸ್ಯೆ ಸರಿ ಹೋಗುವುದಾಗಿ ವೈದ್ಯರು ತಿಳಿಸಿದ್ದರಂತೆ.

ಪ್ರತಿ ಬಾರಿಯೂ ರೀಟಾ ನೋವಿನಿಂದ ಬಳಲುತ್ತಿರುವುದನ್ನು ವಿನೋದ್ ಪಟೇಲ್ ನೋಡಿ ತಾವು ನೋವು ಅನುಭವಿಸುತ್ತಿದ್ದರು. ತನ್ನ ಪತ್ನಿಗೆ ಏನೂ ಮಾಡಲು ಆಗುತ್ತಿಲ್ಲವಲ್ಲವೆಂದು ಕೈಕೈಹಿಸುಕಿಕೊಳ್ಳುತ್ತಿದ್ದರಂತೆ. ರೀಟಾರ ಎರಡೂ ಕಿಡ್ನಿಗಳ ವೈಫಲ್ಯವಾಗಿದ್ದರಿಂದ ಅವರಿಗೆ ಕಿಡ್ನಿ ಕಸಿ ಮಾಡುವ ಅಗತ್ಯವಿತ್ತು. ಕಿಡ್ನಿ ದಾನಿಗಳನ್ನು ಹುಡುಕುವುದು ಸುಲಭದ ಕೆಲಸವಲ್ಲ. ಹೀಗೆ ಕುಳಿತರೆ ಸಮಯ ಮೀರಿಹೋಗುತ್ತದೆ, ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಪತ್ನಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಯೋಚಿಸಿದ ವಿನೋದ್ ಪಟೇಲ್, ತಮ್ಮ ಒಂದು ಕಿಡ್ನಿಯನ್ನು ಪತ್ನಿಗೆ ನೀಡಲು ನಿರ್ಧರಿಸಿದ್ದಾರೆ.

ಅಂದಹಾಗೆ ಇದೇ ಫೆಬ್ರುವರಿ 14ಕ್ಕೆ ಈ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು 23 ವರ್ಷ ತುಂಬಿದೆ. ತಮ್ಮ ಮದುವೆ ವಾರ್ಷಿಕೋತ್ಸವ ಹಾಗೂ ಪ್ರೇಮಿಗಳ ದಿನವಾಗಿರುವ ಕಾರಣ ಈ ದಿನವನ್ನು ಮತ್ತಷ್ಟು ಅವಿಸ್ಮರಣೀಯಗೊಳಿಸುವ ಉದ್ದೇಶದಿಂದ 45 ವರ್ಷದ ವಿನೋದ್ ತಮ್ಮ ಮಡದಿಗೆ ಕಿಡ್ನಿ ನೀಡಲು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ತನ್ನ ಒಂದು ಕಿಡ್ನಿಯನ್ನು ಹೆಂಡತಿಗೆ ನೀಡಿ ಆಕೆಯ ಆರೋಗ್ಯವನ್ನು ಸುಧಾರಿಸಬೇಕೆಂದು ನಿರ್ಧಾರ ಮಾಡಿದ ವಿನೋದ್, ಮೊದಲು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಅವರ ಕಿಡ್ನಿ ರೀಟಾ ಅವರಿಗೆ ಸರಿ ಹೊಂದುತ್ತದೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಬಳಿಕ ಪ್ರೇಮಿಗಳ ದಿನವಾದ ಭಾನುವಾರ ತಮ್ಮ ಪತ್ನಿಗೆ ಒಂದು ಕಿಡ್ನಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪತಿಯ ಕಿಡ್ನಿಯನ್ನು ಪಡೆದ ರೀಟಾ ಇದು ಜೀವನದ ಅತ್ಯಂತ ಅಮೂಲ್ಯವಾದ ಉಡುಗೊರೆ ಎಂದು ಖುಷಿಪಟ್ಟಿದ್ದಾರೆ. ‘ನಮ್ಮ 23 ವರ್ಷದ ದಾಪಂತ್ಯ ಜೀವನದಲ್ಲಿ ನನ್ನ ಪತ್ನಿ ಕಷ್ಟ-ಸುಖದಲ್ಲಿ ಭಾಗಿಯಾಗಿದ್ದಾಳೆ. ಅವಳ ನೋವನ್ನು ನೋಡಲು ನನ್ನಿಂದ ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಅವಳ ಮನವೊಲಿಕೆ ಮಾಡಲು ನನ್ನ ಕಿಡ್ನಿ ನೀಡಲು ನಿರ್ಧರಿಸಿದೆ’ ಎಂದು ವಿನೋದ್ ಹೇಳಿದ್ದಾರೆ.

‘ಒಂದೇ ಕಿಡ್ನಿಯಿಂದ ಆರೋಗ್ಯವಾಗಿರಬಹುದು, ಏನೂ ತೊಂದರೆಯಾಗುವುದಿಲ್ಲವೆಂದು ವೈದ್ಯರು ನನಗೆ ಹೇಳಿದ್ದರು. ಹೀಗಾಗಿ ನನ್ನ ಹೆಂಡತಿ ನೋವು ಅನುಭವಿಸುವುದನ್ನು ಎಷ್ಟು ದಿನ ಹೀಗೆ ನೋಡಲಿ. ಹೀಗಾಗಿ ನಾನು ಪ್ರೇಮಿಗಳ ದಿನವನ್ನು ಮತ್ತಷ್ಟು ಅವಿಸ್ಮರಣೀಯವಾಗಿಸಲು ನನ್ನ ಪತ್ನಿಗೆ ಕಿಡ್ನಿ ದಾನ ಮಾಡಿದ್ದೇನೆ. ಈ ಕಿಡ್ನಿ ಕಸಿ ಮಾಡಲು 6 ಲಕ್ಷ ರೂ. ಖರ್ಚಾಗಿದೆ. ಅದು ನನ್ನ ಜೀವಮಾನದ ಉಳಿತಾಯದ ಹಣವಾಗಿದೆ. ಹಣ ಹೋದರೆ ಹೋಗಲಿ, ನನ್ನ ಹೆಂಡತಿ ಗುಣಮುಖವಾದರೆ ಸಾಕು’ ಎಂದು ವಿನೋದ್ ಹೇಳಿದ್ದಾರೆ. 4 ರಿಂದ 5 ಗಂಟೆಗಳ ಕಾಲ ಆಪರೇಷನ್ ಮಾಡಿ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ಡಾಕ್ಟರ್ ಮಾವನಿ ಹೇಳಿದ್ದಾರೆ.

‘ನನಗೆ ಪತಿಯ ಕಿಡ್ನಿ ಕಸಿ ಮಾಡುವ ಮುನ್ನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸರಿಯಾಗಿ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಇದನ್ನು ಪಾಲಿಸುವುದಾದರೆ ಮಾತ್ರ ನಾನು ನಿನ್ನ ಕಿಡ್ನಿಯನ್ನು ಪಡೆಯುತ್ತೇನೆ’ ಎಂದು ಪತಿಯ ಬಳಿ ಪ್ರಾಮೀಸ್ ಮಾಡಿಸಿಕೊಂಡಿದ್ದೆ. ಇದು ಪ್ರೇಮಿಗಳ ದಿನದಂದು ನನಗೆ ಸಿಕ್ಕ ಬೆಲೆಕಟ್ಟಲಾಗದ ಉಡುಗೊರೆ ಎಂದು ರೀಟಾ ಸಂತೋಷಪಟ್ಟಿದ್ದಾರೆ. ಅಂದಹಾಗೆ ರೀಟಾ ಮತ್ತು ವಿನೋದ್ ದಂಪತಿಗೆ 22 ವರ್ಷದ ಮಗಳು ಹಾಗೂ 16 ವರ್ಷದ ಮಗನಿದ್ದಾನೆ.

Comments are closed.