ರಾಷ್ಟ್ರೀಯ

ಭೀಕರ ಹಿಮಪಾತದಿಂದಾಗಿ ಉತ್ತರಾಖಂಡದಲ್ಲಿ ದಿಢೀರ್ ಪ್ರವಾಹ; 150 ಮಂದಿ ನಾಪತ್ತೆ

Pinterest LinkedIn Tumblr

ಚಮೋಲಿ (ಉತ್ತರಾಖಂಡ): ಭೀಕರ ಹಿಮಪಾತದಿಂದಾಗಿ ಇಲ್ಲಿನ ರಿಷಿ ಗಂಗಾ ನದಿಯಲ್ಲಿ ಸೃಷ್ಟಿಯಾದ ದಿಢೀರ್ ಪ್ರವಾಹ, ಚಮೋಲಿ ನದಿಯಲ್ಲಿ ನರಕ ಸದೃಶ ವಾತಾವರಣ ಸೃಷ್ಟಿಸಿದೆ. ಭಾನುವಾರ ಬೆಳಗ್ಗೆ 10.45ರ ಸುಮಾರಿಗೆ ರಿಷಿ ಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಉಂಟಾಯ್ತು. ನದಿ ಪಾತ್ರಕ್ಕೆ ಭಾರೀ ಪ್ರಮಾಣದ ನೀರು ಹರಿದುಬಂತು. ಹೀಗಾಗಿ, ರಿಷಿ ಗಂಗಾ ನದಿ ಪಾತ್ರದಲ್ಲಿ ನಡೆಯುತ್ತಿದ್ದ ಜಲ ವಿದ್ಯುತ್‌ ಯೋಜನೆಯ ಕಾಮಗಾರಿ ಸ್ಥಳ ಪ್ರವಾಹದಿಂದ ಆವೃತವಾಯ್ತು.

ನದಿ ಪಕ್ಕದಲ್ಲೇ ಇದ್ದ ಜೋಷಿಮಠ ಹೆದ್ದಾರಿಯೂ ಪ್ರವಾಹದ ನೀರಿನಿಂದ ಕೊಚ್ಚಿ ಹೋಯ್ತು. 6 ಹಿಮ ಶಿಖರಗಳಲ್ಲಿ ಹಿಮಪಾತ ಉಂಟಾದ ಕಾರಣ, ಈ ರೀತಿ ದಿಢೀರ್ ಪ್ರವಾಹ ಪರಿಸ್ಥಿತಿ ಉಂಟಾಯ್ತು ಎಂದು ತಿಳಿದುಬಂದಿದೆ. ಇಲ್ಲಿನ ರೈನಿ ಎಂಬ ಪ್ರದೇಶದಲ್ಲಿ ರಿಷಿ ಗಂಗಾ ನದಿಯು ಧೌಲಿ ಗಂಗಾ ನದಿಯನ್ನು ಸೇರುತ್ತದೆ. ಹೀಗಾಗಿ, ಧೌಲಿ ಗಂಗಾ ನದಿಯಲ್ಲೂ ಪ್ರವಾಹ ಪರಿಸ್ಥಿತಿ ಉಂಟಾಯ್ತು. ಗ್ರಾಮದಲ್ಲಿದ್ದ ಐದಾರು ಮನೆಗಳು ನೀರಿನಲ್ಲಿ ಕೊಚ್ಚಿ ಹೋದವು.

ತಪೋವನ ಬಳಿಯಲ್ಲಿ ನಡೆಯುತ್ತಿದ್ದ ಜಲವಿದ್ಯುತ್ ಯೋಜನೆಯ ಕಾಮಗಾರಿ ಪ್ರದೇಶವೂ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇಡೀ ಯೋಜನೆಯೇ ನೀರು ಪಾಲಾಗಿದೆ. ಝುಲ್ಲಾ ಎಂಬಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಎರಡು ಸೇತುವೆಗಳೂ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ, ನದಿ ಪಾತ್ರದಲ್ಲಿದ್ದ ಗ್ರಾಮಗಳ ಸಂಪರ್ಕವೇ ಕಡಿತವಾಗಿದೆ.

ಜಲವಿದ್ಯುತ್ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 17 ಕಾರ್ಮಿಕರು ಸಮೀಪದ ಸುರಂಗವೊಂದರಲ್ಲಿ ಸುರಕ್ಷಿತವಾಗಿದ್ದರು. ಅವರೆಲ್ಲರನ್ನೂ ರಕ್ಷಣಾ ಪಡೆಗಳು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದ್ದು, ಕೂದಲೆಳೆ ಅಂತರದಲ್ಲಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಆದ್ರೆ, ಬ್ಯಾರೇಜ್ ಬಳಿ ಇದ್ದ ನೂರಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಸುರಂಗದ ಬಳಿ ಕರ್ತವ್ಯ ನಿರತರಾಗಿದ್ದ 50ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಕಾಮಗಾರಿ ಸ್ಥಳದ ಉಸ್ತುವಾರಿ ಹೊತ್ತಿದ್ದ ಸಂಸ್ಥೆ ಹೇಳಿದೆ. ಈವರೆಗೆ ತಪೋವನ ಸ್ಥಳದಲ್ಲಿ 2 ಮೃತ ದೇಹಗಳು ಲಭ್ಯವಾಗಿದ್ದು, 3 ದೊಡ್ಡ ಸೇತುವೆಗಳೇ ಕುಸಿದಿರುವ ಕಾರಣ, ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ.

ಐಟಿಬಿಪಿಯ 250 ಯೋಧರು ಹಾಗೂ ಜಲ ವಿದ್ಯುತ್ ಕಾಮಗಾರಿ ಸಂಸ್ಥೆಯ 3 ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ತಪೋವನದ ಬಳಿ ಎಲ್ಲೆಂದರಲ್ಲಿ ಮೃತದೇಹಗಳು ಪತ್ತೆಯಾಗುತ್ತಿವೆ. ಐಟಿಬಿಪಿಯ 3 ತಂಡಗಳು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿವೆ. ಈವರೆಗೆ ಅಂದಾಜು 150 ಮಂದಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.

Comments are closed.