ರಾಷ್ಟ್ರೀಯ

ಅನಾಥ ಶವವನ್ನು ಸ್ಟ್ರೆಚರ್​ ಮೇಲಿಟ್ಟು 2 ಕಿ.ಮೀ. ದೂರ ನಡೆದು ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಮಹಿಳಾ ಎಸ್​ಐ

Pinterest LinkedIn Tumblr

ಆಂಧ್ರ ಪ್ರದೇಶ: ಆಂಧ್ರಪ್ರದೇಶದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆಯ ಕೆಲಸ ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಕಾಸಿಬುಗ್ಗ ಪೊಲೀಸ್ ಠಾಣೆಯ ಎಸ್​ಐ ಸಿರಿಶಾ ಎಂಬ ಮಹಿಳಾ ಅಧಿಕಾರಿ ಹೊಲದಲ್ಲಿ ಕಳೆದ 2 ದಿನಗಳಿಂದ ಅನಾಥವಾಗಿ ಬಿದ್ದಿದ್ದ ಶವವನ್ನು ಸ್ವತಃ ತಾವೇ ಹೊತ್ತೊಯ್ದು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇವರ ಈ ಕಾರ್ಯಕ್ಕೆ ಡಿಜಿಪಿ ಗೌತಮ್ ಸಾವಂಗ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳಿಂದ ಹೊಲದಲ್ಲೇ ಬಿದ್ದಿದ್ದ ವ್ಯಕ್ತಿಯ ಮೃತದೇಹವನ್ನು ಯಾರೊಬ್ಬರೂ ಕೂಡ ಸಾಗಿಸುವ ಕೆಲಸ ಮಾಡಿರಲಿಲ್ಲ. ಅನಾಥವಾಗಿ ಹೊಲದಲ್ಲೇ ಬಿದ್ದಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್​ಐ ಸಿರಿಶಾ ಅನಾಥ ಶವಕ್ಕೆ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾಗಿದ್ದಾರೆ.

ವ್ಯಕ್ತಿಯೊಬ್ಬರ ಸಹಾಯ ಪಡೆದು ಶವವನ್ನು ಸ್ಟ್ರೆಚರ್​ ಮೇಲೆ ಮಲಗಿಸಿ ಸ್ವತಃ ತಾವೇ ಹೊತ್ತೊಯ್ದಿದ್ದಾರೆ. ಬಳಿಕ ಅಂತ್ಯಸಂಸ್ಕಾರ ಮಾಡುವ ಜಾಗಕ್ಕೆ ಹೊಯ್ದು ತಾವೇ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.

ಒಬ್ಬ ಮಹಿಳಾ ಎಸ್​ಐ ಮಾಡಿರುವ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಜೊತೆಗೆ ಆಂಧ್ರಪ್ರದೇಶದ ಡಿಜಿಪಿ ಗೌತಮ್ ಸಾವಂಗ್ ಅವರು ಮಹಿಳಾ ಎಸ್​ಐ ಮಾಡಿರುವ ಈ ಮಾನವೀಯತೆಯ ಕೆಲಸವನ್ನು ಬಹಳ ಮೆಚ್ಚಿಕೊಂಡಿದ್ದಾರೆ.

ಟ್ವೀಟ್ ಮಾಡಿರುವ ಆಂಧ್ರ ಪ್ರದೇಶ ಪೊಲೀಸ್, ಆಂಧ್ರ ಪ್ರದೇಶ ಪೊಲೀಸ್ ಕಾಳಜಿ: ಕಾಸಿಗುಬ್ಬ ಪೊಲೀಸ್ ಠಾಣೆಯ ಮಹಿಳಾ ಎಸ್​ಐ ಕೆ.ಸಿರಿಶಾ ಅವರ ಮಾನವೀಯ ಕಾರ್ಯವನ್ನು ಡಿಜಿಪಿ ಗೌತಮ್ ಸಾವಂಗ್ ಶ್ಲಾಘಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿ ಅನಾಥ ಶವವನ್ನು ಸ್ಟ್ರೆಚರ್​ ಮೇಲಿಟ್ಟು ಅಡವಿ ಕೊತೂರ್​​ನಿಂದ ಸುಮಾರು 2 ಕಿ.ಮೀ. ದೂರ ನಡೆದು ಸಾಗಿದ್ದಾರೆ. ಜೊತೆಗೆ ಅವರೇ ಸತ್ತ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Comments are closed.