ಕರಾವಳಿ

ರಾಜ್ಯದ ಹಲವೆಡೆ ಎಸಿಬಿ ದಾಳಿ : ಮಂಗಳೂರಿನಲ್ಲಿ ಮನಪಾ ಜಂಟಿ ನಿರ್ದೇಶಕ ಎಸಿಬಿ ವಶಕ್ಕೆ

Pinterest LinkedIn Tumblr

ಮಂಗಳೂರು, ಫೆಬ್ರವರಿ.02: ಆದಾಯಕ್ಕಿಂತ ಅಧಿಕ ಆಸ್ತಿ ಮಾಡಿರುವ ಮಾಹಿತಿ ಮೇರೆಗೆ ಬೆಳ್ಳಂಬೆಳಗ್ಗೆ ರಾಜ್ಯದ ಭ್ರಷ್ಟ ಅಧಿಕಾರಿಗಳ ಮನೆಗೆ ದಾಳಿ ಮಾಡುವ ಮೂಲಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಲಂಚಕೋರರಿಗೆ ಶಾಕ್​ ನೀಡಿದೆ.

ಕೋಲಾರ, ಚಿತ್ರದುರ್ಗ ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ ಮತ್ತು ಧಾರವಾಡದಲ್ಲಿ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ಮಾಡುವ ಮೂಲಕ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ.

ಮಂಗಳೂರಿನಲ್ಲಿಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ನಿರ್ದೇಶಕರೊಬ್ಬರ ಮನೆ ಮೇಲೆ ಎಸಿಬಿ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆಗಳ ವಿಭಾಗದ ಕೆ.ವಿ. ಜಯರಾಜ್ ರವರ ಮನೆಗೆ ದಾಳಿ ನಡೆದಿದ್ದು, ಎಸಿಬಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ.

ಜಯರಾಜ್ ಅವರ ಬಿಜೈ ಬಳಿ ಇರುವ ಅಪಾರ್ಟ್ ಮೆಂಟ್ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರಿದಿದೆ.

ಇದರ ಜೊತೆಗೆ ಅವರ ಕಚೇರಿ, ನಗರದ ಪಡೀಲ್ ಬಳಿಯ ಜಯರಾಜ್ ತಂದೆಯ ಮನೆ, ಕೇರಳದಲ್ಲಿರುವ ಜಯರಾಜ್ ಪತ್ನಿಯ ಮನೆ ಮೇಲೂ ದಾಳಿ ನಡೆಸಿದ್ದು, ಪರಿಶೀಲಿಸಲಾಗುತ್ತಿದೆ.

ಕಾರ್ಯಾಚರಣೆಯಲ್ಲಿ ಎಸಿಬಿ ಎಸ್ಪಿ ಬೋಪಯ್ಯ, ಡಿವೈಎಸ್ಪಿ ಕೆ.ಸಿ.ಪ್ರಕಾಶ್‌ ಇನ್ಸ್‌ಪೆಕ್ಟರ್ ಗಳಾದ ಶ್ಯಾಂಸುಂದರ್‌, ಗುರುರಾಜ್‌ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.

Comments are closed.