ರಾಷ್ಟ್ರೀಯ

ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಬಗ್ಗೆ ಗುಣಗಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

ನವದೆಹಲಿ: ಕೊರೋನಾ ಸಾಂಕ್ರಾಮಿಕ ಬಿಕ್ಕಟ್ಟಿನ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್, ಸ್ವಾವಲಂಬನೆ ದೃಷ್ಟಿ ಹೊಂದಿದ್ದು, ಭಾರತೀಯರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಜೆಟ್ ಮಂಡನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಬೆಳವಣಿಗಾಗಿ ಹೊಸ ಅವಕಾಶಗಳ ವಿಸ್ತರಣೆ, ಯುವ ಜನಾಂಗಕ್ಕೆ ಉದ್ಯೋಗ ಸೃಷ್ಟಿ, ಮೂಲ ಸೌಕರ್ಯಕ್ಕಾಗಿ ಹೊಸ ವಲಯಗಳ ಅಭಿವೃದ್ಧಿ, ತಂತ್ರಜ್ಞಾನ ಪ್ರಗತಿ ಕಡೆಗೆ ಗಮನ ಹರಿಸಲಾಗಿದ್ದು, ಈ ಬಜೆಟ್ ನಲ್ಲಿ ಹೊಸ ಸುಧಾರಣೆ ತರಲಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದರು.

ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಅವರ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದರು. ಹೂಡಿಕೆ, ಉದ್ಯಮ ಮತ್ತು ಮೂಲ ಸೌಕರ್ಯ ವಲಯಗಳಲ್ಲಿ ಬಜೆಟ್ ಹಲವು ಸಕಾರಾತ್ಮಕ ಬದಲಾವಣೆಗಳನ್ನು ತರಲಿದ್ದು, ನಿರ್ಮಲಾ ಸೀತಾರಾಮನ್ ಹಾಗೂ ಅವರ ತಂಡವನ್ನು ಅಭಿನಂದಿಸುವುದಾಗಿ ಪ್ರಧಾನಿ ಹೇಳಿದರು.

ಜನಸಾಮಾನ್ಯರಿಗೆ ತೆರಿಗೆ ಹೊರೆಯಾಗದಂತೆ ಅನೇಕ ರೀತಿಯಲ್ಲಿ ಪ್ರಯತ್ನಿಸಲಾಗಿದೆ. ಆದಾಗ್ಯೂ, ಪಾರದರ್ಶಕ ರೀತಿಯ ಬಜೆಟ್ ಕಡೆಗೆ ಗಮನ ಹರಿಸಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರು ಸುಲಭವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಕೃಷಿ ಮೂಲಸೌಕರ್ಯ ನಿಧಿ ಸಹಾಯದಿಂದ ಎಪಿಎಂಸಿ ಮಾರುಕಟ್ಟೆಗಳನ್ನು ಸದೃಢಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮೂಲಸೌಕರ್ಯ ಹಾಗೂ ಎಂಎಸ್ ಎಂಇ ವಲಯಗಳ ಕಡೆಗೆ ವಿಶೇಷ ಗಮನ ಹರಿಸಲಾಗಿದೆ. ಮಹಿಳೆಯರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

Comments are closed.