ರಾಷ್ಟ್ರೀಯ

ರೈತರ ಟ್ರ್ಯಾಕ್ಟರ್ ಪರೇಡ್ ವೇಳೆ ಹಿಂಸಾಚಾರ, ಪೊಲೀಸರಿಂದ ಏಳು ಎಫ್ಐಆರ್ ದಾಖಲು

Pinterest LinkedIn Tumblr

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ಪರೇಡ್ ವೇಳೆ ನಡೆದ ಗಲಭೆಗೆ ಸಂಬಂಧಿಸಿದಂತೆ ಏಳು ಎಫ್ಐಆರ್ ಗಳನ್ನು ದೆಹಲಿ ಪೊಲೀಸರು ಮಂಗಳವಾರ ದಾಖಲಿಸಿರುವುದಾಗಿ ತಿಳಿದುಬಂದಿದೆ. ಪೂರ್ವ ಜಿಲ್ಲೆಯಲ್ಲಿ ಮೂರು, ದ್ವಾರಕದಲ್ಲಿ ಮೂರು ಹಾಗೂ ಶಹದಾರ ಜಿಲ್ಲೆಯಲ್ಲಿ ಒಂದು ಎಫ್ ಐಆರ್ ದಾಖಲಾಗಿದೆ. ಇನ್ನೂ ಹೆಚ್ಚಿನ ಎಫ್ ಐಆರ್ ದಾಖಲಾಗುವ ಸಾಧ್ಯತೆಯಿರುವುದಾಗಿ ಅವರು ತಿಳಿಸಿದ್ದಾರೆ.

ಮಂಗಳವಾರ ನಡೆದ ಪ್ರಭುತ್ವದ ವಿರುದ್ಧ ಪ್ರತಿಭಟನೆ ನಡೆಸಿದ ಸಹಸ್ರಾರು ರೈತರು ಬ್ಯಾರಿಕೇಡ್ ಮುರಿದು, ಪೊಲೀಸರೊಂದಿಗೆ ಸಂಘರ್ಷ ಹಾಗೂ ವಾಹನಗಳನ್ನು ಧ್ವಂಸಗೊಳಿಸುವ ಮೂಲಕ ಐತಿಹಾಸಿಕ ಕೆಂಪುಕೋಟೆಯಲ್ಲಿ ಧರ್ಮವೊಂದರ ಧ್ವಜವನ್ನು ಹಾರಿಸಿದ್ದರು. ಈ ಹಿಂಸಾಚಾರದಲ್ಲಿ 86 ಸಿಬ್ಬಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಐಟಿಒ ಬಳಿ ಟ್ರ್ಯಾಕ್ಟರ್ ವೊಂದು ಮಗುಚಿ ಬಿದ್ದ ಪರಿಣಾಮ ಪ್ರತಿಭಟನಾಕಾರರೊಬ್ಬ ಸಾವನ್ನಪ್ಪಿದ್ದಾನೆ.

ವಿವಿಧ ರೈತ ಸಂಘಟನೆಗಳನ್ನೊಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾ ಗಣರಾಜ್ಯೋತ್ಸವ ಅಂಗವಾಗಿ ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಕರೆ ನೀಡಿತ್ತು.ಉದ್ದೇಶಿತ ಟ್ರ್ಯಾಕ್ಟರ್ ಪರೇಡ್ ಗಾಗಿ ದೆಹಲಿ ಪೊಲೀಸರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿತ್ತು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ ನೀಡಿದೆ.

ಸಿಂಗು ಗಡಿಯಲ್ಲಿ ನಿನ್ನೆ ಬೆಳಗ್ಗೆ 6 ಸಾವಿರದಿಂದ 7 ಸಾವಿರ ಟ್ರ್ಯಾಕ್ಟರ್ ಜಮಾಯಿಸಿದ್ದವು. ಮನವಿ ಹೊರತಾಗಿಯೂ ಕತ್ತಿ, ಗುರಾಣಿ, ಕುದುರೆಯೊಂದಿಗೆ ನಿಹಾಂಗ್ ನೇತೃತ್ವದಲ್ಲಿನ ರೈತರು ಪೂರ್ವ ನಿಗದಿತ ಮಾರ್ಗದ ಬದಲಿಗೆ ಸೆಂಟ್ರಲ್ ದೆಹಲಿಯತ್ತ ಹೊರಟು ಪೊಲೀಸರೊಂದಿಗೆ ಸಂಘರ್ಷ ನಡೆಸಿದ್ದಾರೆ. ಅಲ್ಲದೇ, ಮುಕಾರ್ಬ ಚೌಕ ಮತ್ತು ಟ್ರಾನ್ಸ್ ಪೋರ್ಟ್ ನಗರದಲ್ಲಿ ನಡುವೆ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಮುರಿದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಗಾಜಿಪುರ ಮತ್ತು ಟಿಕ್ರಿ ಗಡಿಯಲ್ಲಿಯೂ ಇಂತಹ ಘಟನೆಗಳು ವರದಿಯಾಗಿವೆ.

ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ಮಾತ್ರ ಮುರಿದಿಲ್ಲ, ಪೊಲೀಸ್ ವಾಹನಗಳ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಗುಂಪನ್ನು ಚದುರಿಸಲು ಪ್ರಯತ್ನಿಸಿದಾಗ ಉದ್ರಿಕ್ತ ರೈತರು ಹಿಂಸಾಚಾರ ನಡೆಸಿದ್ದು, ಬ್ಯಾರಿಕೇಡ್ ಮುರಿದು ಹಾಕಿದ್ದಾರೆ. ಕಬ್ಬಿಣದ ಸರಗಳುಗಳಿಗೆ ಹಾನಿ ಮಾಡಿದ್ದಾರೆ. ಪೊಲೀಸರ ಮೇಲೂ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

Comments are closed.