ರಾಷ್ಟ್ರೀಯ

ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆ ಜಾರಿಗೆ ಸುಪ್ರೀಂಕೋರ್ಟ್ ತಡೆ

Pinterest LinkedIn Tumblr

ನವದೆಹಲಿ: ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆ ಜಾರಿಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ಸಮಸ್ಯೆ ಇತ್ಯರ್ಥಕ್ಕಾಗಿ ನಾಲ್ವರು ಸದಸ್ಯರ ಸಮಿತಿ ರಚನೆಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ಸುಪ್ರೀಂಕೋರ್ಟ್ ಸಮಿತಿಯಲ್ಲಿ ಧನವಂತ್ ಶೇಖಾವತ್, ಜೀತೇಂದ್ರ ಸಿಂಗ್ ಮಾನ್, ಅಶೋಕ್ ಗುಲಾಟಿ ಮತ್ತು ಡಾ.ಪ್ರಮೋದ್ ಕುಮಾರ್ ಇರಲಿದ್ದಾರೆ.

“ಇದು ಸಾವು ಬದುಕಿನ ವಿಚಾರಗಳಾಗಿವೆ. ಕೃಷಿ ಕಾಯ್ದೆಯ ಸಿಂಧುತ್ವದ ಬಗ್ಗೆ ಪ್ರಶ್ನೆ ಇದೆ. ಹಾಗೆಯೇ, ಪ್ರತಿಭಟನೆಗಳಿಂದ ಸಾರ್ವಜನಿಕರ ಜೀವ ಮತ್ತು ಆಸ್ತಿಯ ರಕ್ಷಣೆ ವಿಚಾರದ ಬಗ್ಗೆಯೂ ಆತಂಕ ಇದೆ. ನಮಗೆ ಇರುವ ಅಧಿಕಾರದ ಪರಿಧಿಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತಿದ್ದೇವೆ. ಶಾಸನವನ್ನು ಅಮಾನತಿನಲ್ಲಿಟ್ಟು ಒಂದು ಸಮಿತಿ ರಚಿಸುವ ನಮ್ಮ ಅಧಿಕಾರವನ್ನು ಉಪಯೋಗಿಸುತ್ತಿದ್ದೇವೆ” ಎಂದು ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಹೇಳಿದ್ದಾರೆ.

“ಈ ಸಮಿತಿ ನಮಗಾಗಿ ಇರಲಿದೆ. ಸಮಸ್ಯೆಗೆ ಪರಿಹಾರ ಅಪೇಕ್ಷಿಸುವ ನೀವೆಲ್ಲರೂ ಈ ಸಮಿತಿ ಮುಂದೆ ಬರಬೇಕಾಗುತ್ತದೆ. ಈ ಸಮಿತಿ ನಿಮ್ಮನ್ನ ಶಿಕ್ಷಿಸುವುದಾಗಲೀ ಅಥವಾ ಆದೇಶಿಸುವುದಾಗಲೀ ಮಾಡುವುದಿಲ್ಲ. ನಿಮ್ಮ ವಿಚಾರಗಳನ್ನ ಆಲಿಸಿ ನಮಗೆ ವರದಿ ಸಲ್ಲಿಸುವ ಕೆಲಸ ಮಾಡುತ್ತದೆ ಅಷ್ಟೇ” ಎಂದು ಸಿಜೆಐ ರೈತರಿಗೆ ಭರವಸೆ ನೀಡಿದ್ಧಾರೆ.

ಇದೇ ವೇಳೆ, ಜನವರಿ 26ರಂದು ನವದೆಹಲಿಯಲ್ಲಿ ಗಣರಾಜ್ಯೋತ್ಸವ ಪೆರೇಡ್ ವೇಳೆ ಟ್ರಾಕ್ಟರ್ ರ್ಯಾಲಿ ನಡೆಸದಂತೆ ರೈತರಿಗೆ ತಿಳಿಸಬೇಕೆಂದು ದೆಹಲಿ ಪೊಲೀಸ್ ಮಾಡಿಕೊಂಡ ಮನವಿ ಮೇರೆಗೆ ಸುಪ್ರೀಂ ನ್ಯಾಯಪೀಠ ಇಂದು ರೈತ ಸಂಘಟನೆಗೆ ನೋಟೀಸ್ ನೀಡಿದೆ.

ನಿನ್ನೆ ಪ್ರಾರಂಭವಾದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಕೇಂದ್ರದ ಮೂರು ಕೃಷಿ ಕಾಯ್ದೆಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಕೃಷಿ ಕಾಯ್ದೆಗಳನ್ನ ಹಿಂಪಡೆಯಲು ಯಾಕೆ ಸಾಧ್ಯ ಇಲ್ಲ ಎಂದು ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್ ಆಕ್ಷೇಪಿಸಿದರೂ ಕೇಂದ್ರ ಸರ್ಕಾರ ತನ್ನ ಕೃಷಿ ಕಾಯ್ದೆಗಳನ್ನ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ತನ್ನ ಹಠ ಮುಂದುವರಿಸಿದೆ. ಕೃಷಿ ಕಾಯ್ದೆಗಳನ್ನ ಮಾತ್ರ ಹಿಂಪಡೆಯುವುದಿಲ್ಲ. ಬೇಕಿದ್ದರೆ ಕಾಯ್ದೆಯಲ್ಲಿ ತಿದ್ದುಪಡಿ ತರಲು ಸಿದ್ಧ ಎಂಬುದು ಕೇಂದ್ರದ ವಾದವಾಗಿದೆ. ಆದರೆ, ಪ್ರತಿಭಟನೆ ನಡೆಸುತ್ತಿರುವ ರೈತರು ಕೂಡ ಕೃಷಿ ಕಾಯ್ದೆಗಳನ್ನ ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಹಠ ತೊಟ್ಟಿದ್ದಾರೆ. ಹೀಗಾಗಿ, ಸರ್ಕಾರ ಮತ್ತು ರೈತರ ಮಧ್ಯೆ ಎಂಟು ಬಾರಿ ನಡೆದ ಮಾತುಕತೆ ಯಾವುದೇ ಫಲಕೊಡಲು ವಿಫಲವಾಗಿದೆ.

Comments are closed.