ನವದೆಹಲಿ: ಮಾನವ ಕುಲವನ್ನು ಉಳಿಸಲು ಭಾರತ ನಿರ್ಮಿತ ಎರಡು ಕೋವಿಡ್ ಲಿಸಿಕೆಗಳು ಸಿದ್ಧವಾಗಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು.
16ನೇ ಪ್ರವಾಸಿ ಭಾರತೀಯ ದಿವಸ ಸಮ್ಮೇಳವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಹೊರಗಡೆಯಿಂದ ಪಿಪಿಇ ಕಿಟ್ಸ್, ವೆಂಟಿಲೇಟರ್ಸ್ ಮತ್ತು ಮಾಸ್ಕ್ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಇಂದು ದೇಶ ಸ್ವಾವಲಂಬಿಯಾಗಿದೆ. ಮೇಡ್ ಇನ್ ಇಂಡಿಯಾದ ಎರಡು ಲಸಿಕೆಗಳು ಮಾನವ ಕುಲವನ್ನು ರಕ್ಷಿಸಲು ಸಿದ್ಧವಾಗಿವೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಭಯೋತ್ಪಾದನೆ ವಿರುದ್ಧ ಭಾರತ ಎದ್ದು ನಿಂತಾಗಲೇ ವಿಶ್ವಕ್ಕೂ ಸಹ ಸವಾಲು ಎದುರಿಸುವ ಧೈರ್ಯ ಬಂದಿತು. ಇಂದು ಭಾರತ ಭ್ರಷ್ಟಾಚಾರವನ್ನು ಹೋಗಲಾಡಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಫಲಾನುಭವಿಗಳ ಖಾತೆಗೆ ಲಕ್ಷಾಂತರ ಮತ್ತು ಕೋಟ್ಯಾಂರತ ರೂಪಾಯಿ ನೇರವಾಗಿ ಜಮೆಯಾಗುತ್ತಿದೆ ಎಂದು ಹೇಳಿದರು.
ಭಾರತದಲ್ಲಿ ಸದ್ಯ ನಡೆಯುತ್ತಿರುವ ಬಡವರ ಸಬಲೀಕರಣದ ಬಗ್ಗೆ ವಿಶ್ವವೇ ಚರ್ಚಿಸುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ, ಅಭಿವೃದ್ಧಿ ಹೊಂದುತ್ತಿರುವ ದೇಶವೂ ಮುನ್ನಡೆ ಸಾಧಿಸಬಹುದು ಎಂದು ನಾವು ತೋರಿಸಿದ್ದೇವೆ ಎಂದು ಮೋದಿ ತಿಳಿಸಿದರು.
ಇದೇ ವೇಳೆ ಅನಿವಾಸಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಕಳೆದ ವರ್ಷದ ಸಂಕಷ್ಟದ ಸ್ಥಿತಿಯಲ್ಲಿ ಭಾರತೀಯರು ನಿರ್ವಹಿಸಿದ ಕರ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದೇ ನಮ್ಮ ಸಂಪ್ರದಾಯ. ನಮ್ಮ ಮಣ್ಣಿನ ಸಂಸ್ಕೃತಿ ಎಂದರು. ಸಾಮಾಜಿಕ ಮತ್ತು ರಾಜಕೀಯ ನಾಯಕತ್ವದ ದೃಷ್ಟಿಯಿಂದ ಭಾರತೀಯರ ಮೇಲೆ ವಿಶ್ವದ ನಂಬಿಕೆ ಬಲಗೊಳ್ಳುತ್ತಿದೆ ಎಂದರು.