ರಾಷ್ಟ್ರೀಯ

ಕ್ಲಾಸ್ ರೂಮಿನಲ್ಲಿ ಕುಳಿತುಕೊಳ್ಳುವ ಜಾಗಕ್ಕೆ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ಜಗಳ; ಸಹಪಾಠಿಯನ್ನೇ ಶೂಟ್ ಮಾಡಿ ಕೊಂದ ವಿದ್ಯಾರ್ಥಿ!

Pinterest LinkedIn Tumblr

ನವದೆಹಲಿ: ಕುಳಿತುಕೊಳ್ಳುವ ಜಾಗಕ್ಕೆ ಸಂಬಂಧಿಸಿ ಇಬ್ಬರು SSLC ವಿದ್ಯಾರ್ಥಿಗಳ ಮಧ್ಯೆ ನಡೆದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಶಾಲೆಯ ಒಳಗೆಯೇ ತನ್ನ ಬಳಿಯಿದ್ದ ಪಿಸ್ತೂಲಿನಿಂದ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಮೂರು ಸುತ್ತಿನ ಗುಂಡು ಹಾರಿಸಿ ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿರುವ ಶಿಕಾರ್ಪುರ್​ ನಗರದಲ್ಲಿ ನಡೆದಿದೆ.

ಶಿಕರ್​ಪುರದ ಸೂರಜ್ ಭಾನ್ ಸರಸ್ವತಿ ಅಂತರ್ ಕಾಲೇಜಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ತನ್ನ ಜಾಗದಲ್ಲಿ ಕುಳಿತಿದ್ದ ಇನ್ನೋರ್ವ ವಿದ್ಯಾರ್ಥಿಯನ್ನು ಹಿಂದಿನ ಬೆಂಚಿಗೆ ಹೋಗಿ ಕೂರುವಂತೆ ಗಲಾಟೆ ಮಾಡಿದ್ದ. ಇದಕ್ಕೆ ಬುಧವಾರ ಇಬ್ಬರ ನಡುವೆ ವಾದ ನಡೆದಿತ್ತು. ತನ್ನ ಸೀಟಿನಲ್ಲಿ ಕುಳಿತಿದ್ದ ಸಹಪಾಠಿಯ ವರ್ತನೆಯಿಂದ ಕೋಪಗೊಂಡಿದ್ದ ಆ ವಿದ್ಯಾರ್ಥಿ ಗುರುವಾರ ಶಾಲೆಗೆ ಬರುವಾಗ ಗನ್ ತೆಗೆದುಕೊಂಡು ಬಂದಿದ್ದ. ಮನೆಯಿಂದ ತಂದಿದ್ದ ಪಿಸ್ತೂಲನ್ನು ತನ್ನ ಸ್ಕೂಲ್ ಬ್ಯಾಗ್​ನಲ್ಲಿ ಬಚ್ಚಿಟ್ಟುಕೊಂಡಿದ್ದ. ಎರಡು ತರಗತಿಗಳು ನಡೆದ ಬಳಿಕ ಬ್ಯಾಗ್​ನಿಂದ ಪಿಸ್ತೂಲ್ ಹೊರತೆಗೆದು ತನ್ನ ಸಹಪಾಠಿಯ ಮೇಲೆ ಮೂರು ಬಾರಿ ಗುಂಡು ಹಾರಿಸಿದ್ದ. ತಕ್ಷಣ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಗುಂಡಿನ ಹೊಡೆತಕ್ಕೆ ಬಾಲಕ ಮಾರ್ಗಮಧ್ಯೆ ಸಾವನ್ನಪ್ಪಿದ್ದ.

ಶಾಲೆಯಲ್ಲಿ ಗುಂಡಿನ ಶಬ್ದ ಮೊಳಗುತ್ತಿದ್ದಂತೆ ವಿದ್ಯಾರ್ಥಿಗಳು, ಶಿಕ್ಷಕರು ಗಾಬರಿಯಾಗಿ ಹೊರಗೆ ಓಡಿಬಂದಿದ್ದರು. ಗುಂಡು ಹಾರಿಸಿದ ವಿದ್ಯಾರ್ಥಿ ಕೂಡ ಗಾಬರಿಯಿಂದ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಆಗ ಶಾಲಾ ಸಿಬ್ಬಂದಿಗಳು ಆತನನ್ನು ಅಡ್ಡಗಟ್ಟಿ ಹಿಡಿದಿದ್ದರು. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದರು.

ಆ ಅಪ್ರಾಪ್ತ ಯುವಕನನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಪಿಸ್ತೂಲನ್ನು ವಶಕ್ಕೆ ಪಡೆದಿದ್ದಾರೆ. ಆ ಪಿಸ್ತೂಲ್ ಆತನ ಕೈಸೇರಿದ್ದು ಹೇಗೆಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮೂಲಗಳ ಪ್ರಕಾರ ಆ ಬಾಲಕನ ಚಿಕ್ಕಪ್ಪ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದು, ಆ ಪಿಸ್ತೂಲ್​ಗೂ ಅವರು ಲೈಸೆನ್ಸ್ ಪಡೆದಿದ್ದರು. ರಜೆಯ ಮೇಲೆ ಮನೆಯಲ್ಲಿದ್ದ ಅವರ ಪಿಸ್ತೂಲನ್ನು ಬಾಲಕ ಬ್ಯಾಗ್​ನಲ್ಲಿರಿಸಿಕೊಂಡಿದ್ದ.

Comments are closed.