ರಾಷ್ಟ್ರೀಯ

ಮೊದಲ ಸ್ಥಳೀಯ ಸಂಸ್ಥೆ ಚುನಾವಣೆ; ಕಾಶ್ಮೀರದಲ್ಲಿ 3 ಸ್ಥಾನ ಜಯಿಸಿದ ಬಿಜೆಪಿ

Pinterest LinkedIn Tumblr


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ನಡೆದ ಮೊದಲ ಸ್ಥಳೀಯ ಸಂಸ್ಥೆ ಚುನಾವಣೆಯ ಫ‌ಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಇದೇ ಮೊದಲ ಬಾರಿಗೆಕಾಶ್ಮೀರದಲ್ಲಿ ಬಿಜೆಪಿ ಖಾತೆ ತೆರೆದಿದೆ. ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಯಲ್ಲಿ ಬಿಜೆಪಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕಾಶ್ಮೀರದಲ್ಲಿ ಕೇಸರಿ ಪಕ್ಷದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕಾಕ್‌ಪೋರಾದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ಹಾ ಲತೀಫ್, ಖೋನ್‌ಮೋಹ್‌ 2ನಲ್ಲಿ ಇಜಾಜ್‌ ಹುಸೇನ್‌, ತುಲೈಲ್‌ ಕ್ಷೇತ್ರದಲ್ಲಿ ಇಜಾಜ್‌ ಅಹ್ಮದ್‌ ಖಾನ್‌ ಜಯಭೇರಿ ಬಾರಿಸಿದ್ದಾರೆ. ಒಟ್ಟು 280ಕ್ಷೇತ್ರಗಳ ಪೈಕಿ ನ್ಯಾಷನಲ್‌ಕಾನ್ಫರೆನ್ಸ್‌ ವರಿಷ್ಠ ಫಾರೂಕ್‌ ಅಬ್ದುಲ್ಲಾ ನೇತೃತ್ವದ ಪೀಪಲ್ಸ್‌ ಅಲಯನ್ಸ್‌ ಫಾರ್‌ ಗುಪ್ಕಾರ್‌ ಡಿಕ್ಲರೇಷನ್‌ (ಪಿಎಜಿಡಿ)103 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಬಿಜೆಪಿ 75, ಕಾಂಗ್ರೆಸ್‌ 24, ಅಪ್ನಿ ಪಾರ್ಟಿ 10, ಇತರರು 66 ಕ್ಷೇತ್ರಗಳಲ್ಲಿ ಮುಂದಿವೆ.

ಜಮ್ಮು ಪ್ರಾಂತ್ಯದಲ್ಲಿ, ಬಿಜೆಪಿಯು 73 ಸೀಟುಗಳ ಮುನ್ನಡೆ ಕಾಯ್ದುಕೊಂಡಿದ್ದರೆ, ‌ ಗುಪ್ಕಾರ್‌ ಮೈತ್ರಿ 37 ರಲ್ಲಿ ಗೆಲುವು ಸಾಧಿಸಿದೆ. ಕಾಶ್ಮೀರದಲ್ಲಿ, ಗುಪ್ಕಾರ್‌
ಬರೋಬ್ಬರಿ 71 ಸೀಟುಗಳಲ್ಲಿ ಮುಂದಿದ್ದು, ಬಿಜೆಪಿ 3 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. 25 ದಿನಗಳ ಅವಧಿಯಲ್ಲಿ 280 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಯಾವುದೇ ಹಿಂಸಾಚಾರ ಇಲ್ಲದೇ ಮತದಾನ ನಡೆದಿತ್ತು.

ಜಮ್ಮು-ಕಾಶ್ಮೀರ ಡಿಡಿಸಿ ಚುನಾವಣೆಯ ಮತ ಎಣಿಕೆಗೂ ಮುನ್ನ ಹಲವಾರು ಪಿಡಿಪಿ ಮುಖಂಡರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಇದರಲ್ಲಿ ನ್ಯಾಶನಲ್ ಕಾನ್ಫರೆನ್ಸ್ ನ ನಯೀಂ ಅಖ್ತರ್, ಸರ್ಜಾಜ್ ಮದನಿ, ಪೀರ್ ಮನ್ಸೂರ್ ಮತ್ತು ಹಿಲಾಲ್ ಅಹ್ಮದ್ ಲೋನ್ ಅವರನ್ನು ಕೂಡಾ ಗೃಹಬಂಧನದಲ್ಲಿ ಇರಿಸಲಾಗಿತ್ತು ಎಂದು ವರದಿ ತಿಳಿಸಿದೆ.

ಪ್ರಧಾನಿ ಮೋದಿ ಅವರ ನವ ಕಾಶ್ಮೀರ, ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌, ಸಬ್ಕಾವಿಶ್ವಾಸ್‌ ಪರಿಕಲ್ಪನೆಯ ಮೇಲೆ ಕಾಶ್ಮೀರದ ಜನರುವಿಶ್ವಾಸವಿರಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಿರುವುದು ಸ್ಪಷ್ಟವಾಗಿದೆ.
●ವಿಬೋಧ್‌ ಗುಪ್ತಾ,
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Comments are closed.