ರಾಷ್ಟ್ರೀಯ

‘ಲವ್ ಜಿಹಾದ್’ ಆರೋಪಕ್ಕೆ ಸಾಕ್ಷಿ ಇಲ್ಲ: ಬಂಧಿಸಲ್ಪಟ್ಟ ವ್ಯಕ್ತಿಯ ಬಿಡುಗಡೆಗೆ ಕೋರ್ಟ್ ಅನುಮತಿ

Pinterest LinkedIn Tumblr


ಬರೇಲಿ: ಉತ್ತರ ಪ್ರದೇಶ ಸರ್ಕಾರ ತಿಂಗಳ ಹಿಂದೆ ಜಾರಿಗೆ ತಂದಿದ್ದ ಧಾರ್ಮಿಕ ಮತಾಂತರ ವಿರೋಧಿ ಕಾಯ್ದೆಯಡಿ ಬಂಧಿಸಿದ್ದ ವ್ಯಕ್ತಿಯೊಬ್ಬರ ಬಿಡುಗಡೆಗೆ ನ್ಯಾಯಾಲಯ ಅನುಮತಿ ನೀಡಿದೆ.

ಈ ಪ್ರಕರಣದಲ್ಲಿ 22ರ ಮಹಿಳೆಯನ್ನು ಆಶ್ರಯಧಾಮಕ್ಕೆ ಕಳುಹಿಸಲಾಗಿದ್ದು, ಪತಿಯನ್ನು ಬಂಧಿಸಲಾಗಿತ್ತು. ಅಲ್ಲಿ ಮಹಿಳೆಗೆ ಗರ್ಭಪಾತವಾಗಿರುವುದನ್ನು ಖಾಸಗಿ ಲ್ಯಾಬ್‌ನ ವರದಿ ದೃಢಪಡಿಸಿತ್ತು.

ಈ ಜೋಡಿ ತಮ್ಮ ವಿವಾಹ ನೋಂದಣಿಗೆ ಬಂದಿದ್ದಾಗ ಬಜರಂಗದಳ ಕಾರ್ಯಕರ್ತರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಮಹಿಳೆಯ ಪತಿ ಹಾಗೂ ಬಾವ 13 ದಿನದಿಂದ ಜೈಲಿನಲ್ಲಿದ್ದರು. ಮಹಿಳೆಯನ್ನು ಬಲವಂತವಾಗಿ ಮತಾಂತರಿಸಲಾಗಿದೆ ಎನ್ನುವುದಕ್ಕೆ ಪೊಲೀಸರಿಗೆ ಯಾವ ಪುರಾವೆಯೂ ಸಿಗದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಬೇಕಾಗಿದೆ. ಆಶ್ರಯಧಾಮದಲ್ಲಿದ್ದ ಮಹಿಳೆಗೆ ಗರ್ಭಪಾತವಾದ್ದನ್ನು ಅಲ್ಟ್ರಾಸೌಂಡ್ ವಿಧಾನದ ಮೂಲಕ ವೈದ್ಯ ಡಾ.ಪಿ.ಎಸ್.ಸಿಸೋಡಿಯಾ ದೃಢಪಡಿಸಿದ್ದರು. ತೀವ್ರ ಸ್ರಾವ ಹಾಗೂ ಹೊಟ್ಟೆನೋವಿನ ಕಾರಣಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಸಂದರ್ಭ ನೀಡಿದ ಚುಚ್ಚುಮದ್ದಿನಿಂದ ತಾನು ಮಗುವನ್ನು ಕಳೆದುಕೊಳ್ಳಬೇಕಾಯಿತು ಎಂದು ಮಹಿಳೆ ಆಪಾದಿಸಿದ್ದರು. ಆದರೆ ಈ ಆರೋಪವನ್ನು ಆಸ್ಪತ್ರೆ ನಿರಾಕರಿಸಿತ್ತು.

ಅಪರಾಧ ದಂಡಸಂಹಿತೆಯ ಸೆಕ್ಷನ್ 169ರ ಅನ್ವಯ ಪೊಲೀಸರು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಪುರಾವೆ ಇಲ್ಲದ ಹಿನ್ನೆಲೆಯಲ್ಲಿ ಆರೋಪಿಯ ಬಿಡುಗಡೆಗೆ ಅನುಮತಿ ನೀಡಬೇಕು ಎಂದು ಕೋರಿದ್ದರು. ಮಹಿಳೆಯ ಪತಿ ಹಾಗೂ ಭಾವನನ್ನು 50 ಸಾವಿರ ರೂ. ವೈಯಕ್ತಿಕ ಬಾಂಡ್ ಪಡೆದು ಬಿಡುಗಡೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ ಎಂದು ಮೊರದಾಬಾದ್ ಎಎಸ್ಪಿ ವಿದ್ಯಾಸಾಗರ್ ಮಿಶ್ರಾ ಹೇಳಿದ್ದಾರೆ.

Comments are closed.