ರಾಷ್ಟ್ರೀಯ

ಸರ್ಕಾರದ ವಿರುದ್ಧದ ಯೋಜಿತ ಪಿತೂರಿಯ ಭಾಗವಾಗಿ ಪ್ರತಿಭಟನಾ ನಿರತ ರೈತರನ್ನು ದಾರಿ ತಪ್ಪಿಸಲಾಗಿದೆ: ಮೋದಿ

Pinterest LinkedIn Tumblr


ಅಹ್ಮದಾಬಾದ್: ಕೇಂದ್ರ ಸರ್ಕಾರದ ವಿರುದ್ಧದ ಯೋಜಿತ ಪಿತೂರಿಯ ಭಾಗವಾಗಿ ಪ್ರತಿಭಟನಾ ನಿರತ ರೈತರನ್ನು ದಾರಿ ತಪ್ಪಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ತವರು ಗುಜರಾತ್ ನ ಕಚ್ ನಲ್ಲಿ ಹಲವು ಅಭಿವದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಹಾಲಿನ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಘಟಕ, ಡಸಲೀಕರಣ ಘಟಕ, ಹೈಬ್ರಿಡ್ ನವೀಕರಿಸಬಹುದಾದ ಇಂಧನ ಪಾರ್ಕ್ ನಿರ್ಮಾಣಕ್ಕೆ ಶುಂಕುಸ್ಥಾಪನೆ ನೇರವೇರಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ರೈತ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ವರ್ಷಗಳಿಂದ ಕೇಳುತ್ತಿದ್ದ ಬೇಡಿಕೆಗಳನ್ನೇ ಕೃಷಿ ಕಾಯ್ದೆಗಳ ತಿದ್ದುಪಡಿಗಳು ಒಳಗೊಂಡಿವೆ ಎಂದು ‘ಕೃಷಿ ಕಾಯ್ದೆಗಳನ್ನು’ ಸಮರ್ಥಿಸಿಕೊಂಡರು.

‘ಭಾರತ ಸರ್ಕಾರವು ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ. ಅವರ ಕಳಕಳಿಗೆ ಸರ್ಕಾರ ಓಗೊಡಲಿದೆ. ಕೇಂದ್ರ ಸರ್ಕಾರದ ವಿರುದ್ಧದ ಯೋಜಿತ ಪಿತೂರಿಯ ಭಾಗವಾಗಿ ಪ್ರತಿಭಟನಾ ನಿರತ ರೈತರನ್ನು ದಾರಿ ತಪ್ಪಿಸಲಾಗುತ್ತಿದೆ. ವಿರೋಧ ಪಕ್ಷಗಳಲ್ಲಿ ಕುಳಿತಿರುವವರು ಹಾಗೂ ಇಂದು ರೈತರ ಹಾದಿ ತಪ್ಪಿಸುತ್ತಿರುವವರು, ಅವರ ಆಡಳಿತಾವಧಿಯಲ್ಲಿ ಈ ಕೃಷಿ ಕಾಯ್ದೆ ತಿದ್ದುಪಡಿಗಳ ಕಡೆಗೆ ಒಲವು ತೋರಿದ್ದರು. ಆಗಿನ ಸರ್ಕಾರ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಈಗ ದೇಶವು ಐತಿಹಾಸಿಕ ಹೆಜ್ಜೆ ಇಟ್ಟಿರುವ ಸಮಯದಲ್ಲಿ ಅದೇ ಜನರು ರೈತರ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಮೋದಿ ಆರೋಪಿಸಿದ್ದಾರೆ.

ಅಂತೆಯೇ ರೈತರನ್ನು ಗೊಂದಲಕ್ಕೀಡು ಮಾಡಲು ದೆಹಲಿಯ ಸುತ್ತಮುತ್ತಲು ಪಿತೂರಿ ನಡೆಯುತ್ತಿದೆ. ಹೊಸ ಕೃಷಿ ಕಾಯ್ದೆ ತಿದ್ದುಪಡಿಗಳಿಂದ ರೈತರ ಭೂಮಿಯನ್ನು ಮತ್ತೊಬ್ಬರು ಆಕ್ರಮಿಸಿಕೊಳ್ಳುತ್ತಾರೆ ಎಂದು ಬೆದರಿಕೆ ಉಂಟು ಮಾಡಲಾಗಿದೆ. ಡೈರಿಯೊಂದು ನಿಮ್ಮಿಂದ ಹಾಲು ಸಂಗ್ರಹಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿರುತ್ತದೆ ಎಂದಿಟ್ಟುಕೊಳ್ಳಿ, ಅವರು ನಿಮ್ಮ ಜಾನುವಾರುಗಳನ್ನೂ ತೆಗೆದುಕೊಂಡು ಹೋಗುವರೇ?’ ಎಂದು ಮೋದಿ ಪ್ರಶ್ನಿಸಿದ್ದಾರೆ. ನೀವೇ ಆ ಜಾನುವಾರಗಳ ಮಾಲೀಕರು.. ಏಕೆಂದರೆ ಹಾಲನ್ನು ಆ ಸಂಸ್ಥೆಗಳಿಗೆ ಮಾರುತ್ತಿರುವವರು ನೀವು.. ಅಂದರೆ ರೈತರು. ಕಾಯ್ದೆಗೆ ಸಂಬಂಧಿಸಿದಂತೆ ನಾನು ಯಾವುದೇ ಸಂದರ್ಭದಲ್ಲೂ ಸ್ಪಷ್ಟನೆ ನೀಡಲು ಸಿದ್ಧನಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಹದಿನೈದು ದಿನಗಳಿಂದ ಪಂಜಾಬ್, ಹರಿಯಾಣ ಮತ್ತು ಇತರೆಡೆಗಳಿಂದ ಸಾವಿರಾರು ರೈತರು ಸಿಂಗು ಗಡಿ ಮತ್ತು ಟಿಕ್ರಿ ಗಡಿ ಸೇರಿದಂತೆ ದೆಹಲಿಯ ವಿವಿಧ ಗಡಿ ಕೇಂದ್ರಗಳ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

Comments are closed.