ರಾಷ್ಟ್ರೀಯ

ಮಗ ‘ಅಮ್ಮಾ’ ಎಂದು ಕರೆಯಲಿ ಎಂದು 30 ವರ್ಷದಿಂದ ಕಾದ ತಾಯಿ: ಕರೆದಾಗ ಶವವಾಗಿದ್ದಳು!

Pinterest LinkedIn Tumblr


ತಿರುವನಂತಪುರ: ಶರತ್​ ಚಂದ್ರನ್​ ಹುಟ್ಟುತ್ತಲೇ ಬುದ್ಧಿಮಾಂದ್ಯ. 30 ವರ್ಷಗಳ ಕಾಲ ಆತನಿಗಾಗಿ ತಾಯಿ ಶೈಲಜಾ ಮಾಡದ ಚಿಕಿತ್ಸೆ ಇಲ್ಲ, ಕಂಡ ಕಂಡ ವೈದ್ಯರ ಮೊರೆ ಹೋದರು, ಕಂಡ ಕಂಡ ದೇವರ ಹರಕೆ ಹೊತ್ತರು. ಆದರೂ ಮಗನ ಪರಿಸ್ಥಿತಿ ಸುಧಾರಿಸಲೇಇಲ್ಲ. ತಮ್ಮ ಮಗನಿಂದ ಕೊನೆಯ ಪಕ್ಷ ಅಮ್ಮಾ ಎಂದು ಕೇಳುವ ಹಂಬಲ ಶೈಲಜಾ ಅವರಿಗಿತ್ತು.

ಇತ್ತ ತಂದೆ ರಾಮಚಂದ್ರ ಕುರುಪ್ ಅವರು ಕೂಡ ಮಗನನ್ನು ತುಂಬಾ ಆರೈಕೆಯಿಂದಲೇ ನೋಡಿಕೊಳ್ಳುತ್ತಿದ್ದರು. ಆದರೆ ಶರತ್‍ಗೆ ಮಾತ್ರ ನಡೆಯಲು, ಮಾತನಾಡಲು ಹಾಗೂ ಕೈಕಾಲುಗಳನ್ನು ಸರಿಸಲು ಸಾಧ್ಯವಾಗಲಿಲ್ಲ.

ತಾಯಿ ಶೈಲಜಾ ಅವರು ಪ್ರತಿ ದಿನ ಮಗನ ಕಾಲು ಮುಟ್ಟಿ ನಮಸ್ಕರಿಸಿಯೇ ತಮ್ಮ ದಿನಚರಿ ಆರಂಭಿಸುತ್ತಿದ್ದರು ಎಂದು ಸ್ಮರಿಸಿಕೊಳ್ಳುತ್ತಾರೆ ರಾಮಚಂದ್ರ.

ಕಳೆದ ಜನವರಿಯಲ್ಲಿ ಈ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ಶೈಲಜಾ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಮಗ ಶರತ್​ಗೆ ಅಮ್ಮ ಹಾಸಿಗೆ ಮೇಲೆ ಒದ್ದಾಡುತ್ತಿರುವುದನ್ನು ನೋಡಲು ಆಗುತ್ತಿರಲಿಲ್ಲ. ತನ್ನ ಬಾಯಿಯಿಂದ ಅಮ್ಮಾ ಎಂದು ಕೇಳಲು ಆಕೆ ಬಯಸುತ್ತಿರುವುದು ಶರತ್​ಗೆ ತಿಳಿಯಿತು.

ಅದೊಂದು ದಿನ ತನ್ನೆಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ‘ಅಮ್ಮಾ’ ಎಂದು ಕರೆದೇ ಬಿಟ್ಟ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮಗ ಅಮ್ಮಾ ಎಂದು ಹೇಳುವ ಮೊದಲೇ ಶೈಲಜಾ ಕೊನೆಯುಸಿರೆಳೆದಿದ್ದರು.

ಅಮ್ಮನ ಸಾವಿನಿಂದ ಶರತ್​ ಕುಗ್ಗಿ ಹೋಗಿದ್ದ. ಆಕೆಯ ನೆನಪಿನಲ್ಲಿಯೇ ಕೊರಗುತ್ತಿದ್ದ ಶರತ್​ ಇದೀಗ ಪ್ರಾಣ ಬಿಟ್ಟಿದ್ದಾನೆ. ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಶರತ್​ ಮೃತಪಟ್ಟಿದ್ದಾನೆ.

ಇದೀಗ ಈ ಅಮ್ಮ-ಮಗನ ನೋವಿನ ಘಟನೆಯನ್ನು ಅಮೆರಿಕದ ಡಿಸ್ನಿ ಕ್ರೂಸ್ ಲೈನ್ಸ್ ಶಿಪ್ಪಿಂಗ್ ಕಾರ್ಪೊರೇಶನ್‍ನಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ರಾಮಚಂದ್ರ ಅವರು ಹಂಚಿಕೊಂಡಿದ್ದಾರೆ.

Comments are closed.