ಮನೋರಂಜನೆ

ಬಾಲಿವುಡ್‌ ನಟರ ಮನೆ ಖರೀದಿಗೆ ಪಾಕ್ ನಿರ್ಧಾರ! ಕಾರಣ ಏನು ಗೊತ್ತಾ?

Pinterest LinkedIn Tumblr


ಮುಂಬೈ: ಬಾಲಿವುಡ್ ನಟರಾದ ರಾಜ್‌ ಕಪೂರ್‌ ಮತ್ತು ದಿಲೀಪ್‌ ಕುಮಾರ್‌ ಅವರ ಮನೆ ಈಗ ಮಾರಾಟ ಆಗುತ್ತಿವೆ. ಅದನ್ನು ಖರೀದಿಸುತ್ತಿರುವುದು ಪಾಕ್ ಸರ್ಕಾರ ಎಂಬುದು ವಿಶೇಷ.

ಬಾಲಿವುಡ್‌ ನಟರಾದ ರಾಜ್‌ ಕಪೂರ್‌ ಮತ್ತು ದಿಲೀಪ್‌ ಕುಮಾರ್‌ ಅವರ ಮನೆಯನ್ನು ಖರೀದಿಸಲು ಪಾಕಿಸ್ತಾನದ ಸ್ಥಳೀಯ ಸರ್ಕಾರ ಮುಂದಾಗಿದೆ. ಪಾಕಿಸ್ತಾನಕ್ಕೂ ಈ ಸ್ಟಾರ್‌ ನಟರ ಮನೆಗೂ ಏನು ಸಂಬಂಧ? ಸಿನಿಪ್ರಿಯರ ಮನದಲ್ಲಿ ಈ ಪ್ರಶ್ನೆ ಮೂಡುವುದು ಸಹಜ. ಉತ್ತರ ಸಿಂಪಲ್‌; ಬಾಲಿವುಡ್‌ನ ಈ ಕಲಾವಿದರ ಪೂರ್ವಜರ ಮನೆ ಪಾಕಿಸ್ತಾನದಲ್ಲಿದೆ!

ಭಾರತ ಮತ್ತು ಪಾಕಿಸ್ತಾನ ವಿಭಜನೆ ಆಗುವುದಕ್ಕೂ ಮುನ್ನ ದಿಲೀಪ್‌ ಕುಮಾರ್‌ ಮತ್ತು ರಾಜ್‌ ಕಪೂರ್‌ ಅವರ ಪೂರ್ವಜರು ಪೇಶಾವರದಲ್ಲಿ ವಾಸವಾಗಿದ್ದರು. ನಂತರ ಪೇಶಾವರವು ಪಾಕಿಸ್ತಾನಕ್ಕೆ ಸೇರಿತು. ಆಗ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂತು ಕಪೂರ್‌ ಕುಟುಂಬ. ಪೇಶಾವರದಲ್ಲಿದ್ದ ಅವರ ಭವ್ಯ ಬಂಗಲೆಯನ್ನು ಬಿಟ್ಟು ಬರಬೇಕಾಯಿತು. ನಂತರ ಈ ಕುಟುಂಬದ ರಾಜ್‌ ಕಪೂರ್, ಶಮ್ಮಿ ಕಪೂರ್‌, ಶಶಿ ಕಪೂರ್‌, ರಿಷಿ ಕಪೂರ್, ರಣಬೀರ್‌ ಕಪೂರ್‌ ಸೇರಿದಂತೆ ಅನೇಕರು ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಗಳಿಸಿದರು.

ಈ ಪುರಾತನ ಮನೆಗಳನ್ನು 1920ರ ದಶಕದಲ್ಲಿ ನಿರ್ಮಿಸಲಾಗಿತ್ತು. ಅವು ಈಗ ಶಿಥಿಲಾವಸ್ಥೆಯಲ್ಲಿವೆ. ಪುರಾತನ ವಾಸ್ತುಶೈಲಿಯಲ್ಲಿ ಇರುವ ಈ ಬಂಗಲೆಗಳು ಸ್ಥಳೀಯರೊಬ್ಬರ ಒಡೆತನದಲ್ಲಿವೆ. ಅದನ್ನು ಖರೀದಿಸಿ ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕು ಎಂಬುದು ಅಲ್ಲಿನ ಸರ್ಕಾರದ ಯೋಜನೆ. ಕಪೂರ್‌ ಹವೇಲಿ ಎಂದೇ ಫೇಮಸ್‌ ಆಗಿದ್ದ ರಾಜ್‌ ಕಪೂರ್‌ ಮನೆಗೆ ಒಂದೂವರೆ ಕೋಟಿ ರೂ. ದರ ನಿಗದಿ ಮಾಡಲಾಗಿದೆ. ದಿಲೀಪ್‌ ಕುಮಾರ್‌ ಪೂರ್ವಜರ ಮನೆಗೆ 80 ಲಕ್ಷ ರೂ. ನಿಗದಿ ಮಾಡಲಾಗಿದೆ.

ಈ ಬಂಗಲೆಗಳ ಮಾಲೀಕತ್ವ ಹೊಂದಿರುವವರು ಅನೇಕ ಬಾರಿ ಇವುಗಳನ್ನು ನೆಲಸಮಗೊಳಿಸಲು ಪ್ರಯತ್ನ ಮಾಡಿದ್ದರು. ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ಕಟ್ಟುವುದು ಅವರ ಉದ್ದೇಶ ಆಗಿತ್ತು. ಆದರೆ ಅದಕ್ಕೆ ಅಲ್ಲಿನ ಪುರಾತತ್ವ ಇಲಾಖೆ ಅನುಮತಿ ನೀಡಿಲ್ಲ. ಈ ಎರಡು ಬಂಗಲೆಗಳನ್ನು ರಾಷ್ಟ್ರೀಯ ಸ್ಮಾರಕಗಳನ್ನಾಗಿ ಮಾರ್ಪಡಿಸಬೇಕು ಎಂಬ ಉದ್ದೇಶದೊಂದಿಗೆ ಸರ್ಕಾರವೇ ಕೊಂಡುಕೊಳ್ಳಲು ನಿರ್ಧರಿಸಿದೆ.

Comments are closed.