ರಾಷ್ಟ್ರೀಯ

ಬೇಗ ಆತ್ಮಹತ್ಯೆ ಮಾಡಿಕೋ ಎಂದ ಪ್ರಿಯತಮ​; ವಿಡಿಯೋ ಕಾಲ್​ನಲ್ಲೇ ನೇಣು ಬಿಗಿದುಕೊಂಡ ಯುವತಿ

Pinterest LinkedIn Tumblr


ಚೆನ್ನೈ: ಯೋಧನೊಬ್ಬನನ್ನು ಪ್ರೀತಿಸಿದ್ದ ತಪ್ಪಿಗೆ ಆತನೊಂದಿಗೆ ವಿಡಿಯೋ ಕಾಲ್​ನಲ್ಲಿ ಇದ್ದಾಗಲೇ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಆಕೆಯ ಪ್ರಿಯತಮನೇ ಯುವತಿಗೆ ಸಾಯುವುದಕ್ಕೆ ಹೇಳಿದ್ದಾನೆ ಎನ್ನುವುದು ಇದೀಗ ತಿಳಿದುಬಂದಿದೆ.

ಚೆನ್ನೈನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಭಾರತಿ(26) ವಿಡಿಯೋ ಕಾಲಿಂಗ್ ಆಯಪ್​ ಒಂದರಲ್ಲಿ ಕುಮಾರ್​ಸೇನ್​ನೊಂದಿಗೆ ಸ್ನೇಹ ಬೆಳೆಸಿದ್ದಾಳೆ. ನಾಗ್ಪುರ ಮೂಲದ ಆತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಆತನೊಂದಿಗಿದ್ದ ಸ್ನೇಹ ಕೆಲವೇ ದಿನದಲ್ಲಿ ಪ್ರೀತಿಯಾಗಿ ಬದಲಾಗಿದೆ. ನವೆಂಬರ್​ 18ರಂದು ಕುಮಾರ್​ಸೇನ್​ ನಾಗ್ಪುರದಿಂದ ಚೆನ್ನೈಗೆ ಭಾರತಿಯನ್ನು ನೋಡಲೆಂದು ಬಂದಿದ್ದ. ಆ ಸಮಯದಲ್ಲಿ ಯುವತಿಗೆ ಅಘಾತವಾಗಿದೆ.

ಕುಮಾರ್​ಸೇನ್​ಗೆ ಈ ಹಿಂದೆಯೇ ಒಂದು ಮದುವೆಯಾಗಿತ್ತು. ಇಬ್ಬರು ಮುದ್ದಾದ ಮಕ್ಕಳೂ ಇದ್ದರು. ಆದರೆ ಭಾರತಿಯೊಂದಿಗೆ ಹುಚ್ಚು ಪ್ರೀತಿಯಲ್ಲಿದ್ದ ಆತ ಆಕೆಯನ್ನು ಎರಡನೇ ಮದುವೆಯಾಗಲು ಬಯಸಿದ್ದ. ಈ ವಿಚಾರ ಭಾರತಿಗೆ ನವೆಂಬರ್​ 18ಕ್ಕೆ ಗೊತ್ತಾಗಿದೆ. ಮದುವೆಯಾಗಿರುವ ನಿನ್ನೊಂದಿಗೆ ಪ್ರೀತಿ ಸಾಧ್ಯವಿಲ್ಲ ಎಂದ ಆಕೆ ಪ್ರೀತಿಯನ್ನು ಮುರಿಯಲು ಮುಂದಾಗಿದ್ದಾಳೆ. ಆದರೆ ಅದಕ್ಕೆ ಕುಮಾರ್​ಸೇನ್​ ಒಪ್ಪಿಲ್ಲ. ನೀನು ನನ್ನ ಮದುವೆಯಾಗಲೇ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾನೆ.

ಕುಮಾರ್​ಸೇನ್​ನ ಈ ನಡವಳಿಕೆಯಿಂದ ಬೇಸತ್ತಿದ್ದ ಭಾರತಿ ಆತ್ಮಹತ್ಯೆಗೆ ಶರಣಾಗುವ ನಿರ್ಧಾರ ಮಾಡಿದ್ದಾಳೆ. ಡಿಸೆಂಬರ್​ 2ರಂದು ಕುಮಾರ್​ಸೇನ್​ನೊಂದಿಗೆ ವಿಡಿಯೋ ಕಾಲ್​ನಲ್ಲಿರುವಾಗ ತನ್ನ ಕೈ ಕೊಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆದರೆ ಅದಾಗದಿದ್ದಾಗ, ನೇಣು ಹಾಕಿಕೋ, ಬೇಗ ಸಾಯುತ್ತೀಯ ಎಂದು ಕುಮಾರ್​ಸೇನ್​ ಸಲಹೆ ಕೊಟ್ಟಿದ್ದಾನೆ. ಅದರಂತೆ ಭಾರತಿ ವಿಡಿಯೋ ಕಾಲ್​ನಲ್ಲಿರುವುಗಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಮೃತರ ಫೋನ್​ ಕಾಲ್​ ಪರಿಶೀಲನೆ ನಡೆಸಿದಾಗ ನಡೆದ ವಿಚಾರಗಳು ಹೊರಬಿದ್ದಿದೆ. ಕುಮಾರ್​ಸೇನ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.

Comments are closed.